ಹೊಳೆನರಸೀಪುರ: ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎಂಬ ಅನುಮಾನದಿಂದ ಸಂಬಂಧಿಕರೇ ಸೇರಿ ಮಂಡ್ಯ ಮೂಲದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಹೂತಿದ್ದ ಪ್ರಕರಣ ಒಂದು ವಾರದ ನಂತರ ಬಯಲಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ಹತ್ಯೆಯಾಗಿರುವ ದುರ್ದೈವಿ. ಈತನನ್ನು ಕೊಂದು ಭಂಟರ ತಳಲು ಬಳಿಯ ಅರಣ್ಯ ಪ್ರದೇಶದ ಮಂಟಿಯಲ್ಲಿಹೂತು ಹಾಕಿದ್ದರು.
ಕೊಲೆಯಾಗಿರುವ ಮೋಹನ್ ಜಮೀನಿನ ಪಕ್ಕದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ತಮಿಳುನಾಡು ಮೂಲದ ರಾಜು ಗಣಿ ಮಾಲೀಕರಾಗಿದ್ದರು. ಮೋಹನ್ ಸಂಬಂಧಿಕರಾದ ತೇಜು, ಕುಮಾರ್ ಎಂಬವರು ಸೇರಿ ಮೈನಿಂಗ್ ನಡೆಸುತ್ತಿದ್ದರು. ಇಲ್ಲಿ ಸುಣ್ಣದ ಕಲ್ಲನ್ನು ಪುಡಿ ಮಾಡಿ ರಸಗೊಬ್ಬರದೊಂದಿಗೆ ಮಿಶ್ರಣ ಮಾಡಿ ಕಾನೂನು ಬಾಹಿರವಾಗಿ ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕಳೆದ 15 ದಿನಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಅಕ್ರಮ ಕಲ್ಲು ಗಣಿಗಾರಿಕೆ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಲು ಮೋಹನ್ ಕಾರಣ, ಈತನೇ ಮಾಹಿತಿ ನೀಡಿದ್ದಾನೆ ಎಂದು ಅನುಮಾನಗೊಂಡ ಸಂಬಂಧಿಕರು ಈತನನ್ನು ಹೀಗೆಯೇ ಬಿಟ್ಟರೆ ಮುಂದೆ ನಮಗೇ ಮುಳುವಾಗುತ್ತಾನೆ ಎಂದು ಭ್ರಮಿಸಿ ಆತನನ್ನು ಮುಗಿಸಲು ಸ್ಕೆಚ್ ಹಾಕಿದರು. ಕಳೆದ ಮೇ 15 ರಂದು ಜಮೀನು ಬಳಿಗೆ ಹೋಗಿ ಬರುತ್ತೇನೆಂದು ಹೋದ ಮೋಹನ್ ದಿಢೀರ್ ನಾಪತ್ತೆಯಾಗಿದ್ದ.
ಮೋಹನ್ ಏಕಾಏಕಿ ಕಾಣೆಯಾದ ದಿನವೇ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಇದೀಗ ಕೊಲೆ ರಹಸ್ಯ ಬಿಚ್ಚಿಟ್ಟಿರುವವರ ಮೇಲೆ ಅನುಮಾನ ವ್ಯಕ್ತಪಡಿಸಿ, ಇವರನ್ನು ಬಂಧಿಸಿ ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದೆವು. ಆದರೆ ಪೊಲೀಸರು ಈ ಬಗ್ಗೆ ಆಸಕ್ತಿ ತಳೆಯಲಿಲ್ಲ, ತನಿಖೆಗೂ ಮುಂದಾಗಲಿಲ್ಲ ಎಂದು ಮೃತನ ಮನೆಯವರು ಆರೋಪಿಸಿದ್ದಾರೆ.
ಗಣಿಗಾರಿಕೆ ಮೇಲಿನ ದಾಳಿಗೂ, ಮೋಹನ್‌ಗೂ ಯಾವುದೇ ಸಂಬಂಧವಿಲ್ಲ. ಆದರೂ ಆತನನ್ನು ಅಪಹರಿಸಿ ಕೊಲೆ ಮಾಡಿ, ದೂರಕ್ಕೆ ಶವ ತಂದು ಹೂತು ಹಾಕಿದ್ದಾರೆ. ಕೆಲ ದಿನಗಳ ಬಳಿಕ ನಾಗಮಂಗಲ ಶಾಸಕ ಸುರೇಶ್‌ಗೌಡ ಅವರು ಮಧ್ಯೆ ಪ್ರವೇಶಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಎಂದು ಸೂಚಿಸಿದ ನಂತರ ಪೊಲೀಸರು ಎಚ್ಚೆತ್ತುಕೊಂಡರು. ಇದೀಗ ಕೊಲೆಗಡುಕರು ಸಿಕ್ಕಿ ಬಿದ್ದಿದ್ದು, ಅವರಿಗೆ ತಕ್ಕಶಾಸ್ತಿಯಾಗಬೇಕು. ಅಲ್ಲದೆ ನಿರ್ಲಕ್ಷ್ಯ ತೋರಿದ ಪೊಲೀಸರ ಮೇಲೂ ಕ್ರಮ ಆಗಬೇಕು ಎಂದು ನರಗಲು ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ.
ಘಟನೆ ನಡೆದ ದಿನದಿಂದಲೂ ಜಾಣಗುರುಡು ಪ್ರದರ್ಶಿಸಿದ್ದ ಪೊಲೀಸರು, ಶಾಸಕರ ಸೂಚನೆ ನಂತರ ದಿಢೀರ್ ಎಚ್ಚೆತ್ತು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಕೊಲೆ ಕೃತ್ಯ ಬಯಲಾಗಿದೆ.
ಮೋಹನ್‌ನನ್ನು ನಾವೇ ಕೊಲೆ ಮಾಡಿ ಹೂತು ಹಾಕಿದ್ದೇವೆ ಎಂದು ಬಂಧಿತರಾದ ರಾಜು, ತೇಜು, ಕುಮಾರ್ ತಪ್ಪೊಪ್ಪಿಕೊಂಡಿದ್ದಾರೆ. ಅವರ ಮಾಹಿತಿ ಆಧರಿಸಿ ಆರೋಪಿಗಳೊಂದಿಗೆ ಇಂದು ಶವ ಹೂತಿದ್ದ ಸ್ಥಳಕ್ಕೆ ಆಗಮಿಸಿದ ಬಿಂಡಿಗನವಿಲೆ ಪೊಲೀಸರು, ಹಳ್ಳಿ ಮೈಸೂರು ಪೊಲೀಸರ ಸಹಕಾರದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದು ಮಹಜರು ನಡೆಸಿದರು.ತಮ್ಮ ಅಕ್ರಮದ ಹುಳುಕು ಬಯಲಾಗಲು ಮೋಹನನೇ ಕಾರಣ ಎಂದು ಅನುಮಾನಿಸಿ ಅಮಾಯಕನ ಜೀವ ತೆಗೆದ ಮೂವರು ಈಗ ಕಂಬಿ ಎಣಿಸುವಂತಾಗಿದೆ.