ಮಂಗಳೂರು: ದಿವಂಗತ ಕುದ್ರೋಳಿ ಹಸನಬ್ಬ ಸಾಬ್ ಅವರು ನುಡಿದಂತೆಯೇ ನಡೆದ ಸಾತ್ವಿಕ ವ್ಯಕ್ತಿ. ಕೋಮು ಸೌಹಾರ್ದಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ಮುಹಮ್ಮದ್ ಮಸೂದ್ ಬಣ್ಣಿಸಿದ್ದಾರೆ.
ಹಿರಿಯ ಧಾರ್ಮಿಕ ಹಾಗೂ ಸಾಮಾಜಿಕ ಮುತ್ಸದ್ದಿ, ದಿವಂಗತ ಕುದ್ರೋಳಿ ಹಸನಬ್ಬ ಸಾಬ್ ಅವರ ಕುರಿತು ಹೊರತಂದಿರುವ “ಕರಾವಳಿ ಕರ್ನಾಟಕ ಕಂಡ ಅಪರೂಪದ ಸಮಾಜ ಸೇವಕ ದಿವಂಗತ ಕುದ್ರೋಳಿ ಹಸನಬ್ಬ ಸಾಬ್” ಕೃತಿಯನ್ನು ಶುಕ್ರವಾರ ಕುದ್ರೋಳಿಯ ಜಾಮಿಯಾ ಮಸೀದಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕುದ್ರೋಳಿ ಹಸನಬ್ಬ ಸಾಬ್ ಅವರು ಸರಳ ಮತ್ತು ಸಜ್ಜನ ವ್ಯಕ್ತಿತ್ವದ ಅತ್ಯಂತ ಅಪರೂಪದ ಸಾಮಾಜಿಕ, ಧಾರ್ಮಿಕ ಮುಂದಾಳುವಾಗಿದ್ದರು. ಅಪಾರ ಧಾರ್ಮಿಕ ನಿಷ್ಠೆಯ ಅವರು ತಮ್ಮ ಬದುಕಿನುದ್ದಕ್ಕೂ ಇಸ್ಲಾಮಿನ ಮೌಲ್ಯಗಳೊಂದಿಗೆ ಬದುಕಿ ಇತರರಿಗೆ ಮಾದರಿಯಾದರು. ಸೇವಾ ಚಟುವಟಿಕೆಗಳಲ್ಲೂ ಅವರು ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದರು.
ದಿವಂಗತ ಕುದ್ರೋಳಿ ಹಸನಬ್ಬ ಸಾಬ್ ಅವರ ಮಕ್ಕಳು, ಮೊಮ್ಮಕ್ಕಳು ಇಂದಿಗೂ ಅವರದೇ ಆದರ್ಶ ಪಾಲಿಸಿಕೊಂಡು ಬರುತ್ತಿದ್ದಾರೆ. ವಿವಿಧ ರಂಗಗಳಲ್ಲಿ ಸಮುದಾಯ ಹಾಗು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಮುಫ್ತಿ ಅಬ್ದುಲ್ ಮನ್ನಾನ್ ಅವರೂ ಹಸನಬ್ಬ ಅವರ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕುದ್ರೋಳಿ ಜಾಮಿಯಾ ಮಸೀದಿಯ ಕಾರ್ಯದರ್ಶಿ ಖಲೀಲ್ ಅಹ್ಮದ್, ಹಿದಾಯ ಫೌಂಡೇಶನ್ ನ ಮಕ್ಬೂಲ್ ಅಹ್ಮದ್, ಹಿರಿಯರಾದ ಯೂಸುಫ್ ಕಾರ್ದಾರ್, ಹಸನಬ್ಬ ಅವರ ಪುತ್ರರಾದ ಫಾರೂಕ್ ಹಸನ್, ಉಸ್ಮಾನ್ ಹಸನ್ , ಸಾದಿಕ್ ಹಸನ್ , ಯಾಸಿರ್ ಹಸನ್, ಮೊಮ್ಮಗ ಉಮರ್ ಫಾರೂಕ್ ಪುತ್ತಿಗೆ, ಮೊಮ್ಮಗ ಹಾಗು ಪುಸ್ತಕದ ಸಂಪಾದಕ ಅಕ್ರಮ್ ಹಸನ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.