►►ಮಾತೃಭಾಷೆಯಲ್ಲಿ ಭಾಷಣ ಮಾಡಿದ ಸಂಸದ ಚಂದ್ರ ಆರ್ಯ
ಒಟ್ಟಾವ: ತುಮಕೂರು ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅಲ್ಲಿನ ಸಂಸತ್ ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕೆನಾಡ ಸಂಸತ್ತಿನಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ , ಮಾನ್ಯ ಸಭಾಪತಿ.. ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾ ಸಂಸತ್ತಿನ ಸಂಸದನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು ಈ ಸಂಸತ್ತಿನಲ್ಲಿ 2018ರಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದರು. ಇದೀಗ, ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೇನೆ. ರಾಷ್ಟ್ರಕವಿ ಕುವೆಂಪು ಬರೆದಿರುವ, ನಟಸಾರ್ವಭೌಮ ಹಾಡಿರುವ ಡಾ. ರಾಜ್ ಕುಮಾರ್ ಹಾಡಿರುವ ಕೆಲವು ಹಾಡಿನ ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿ ಎಂದು ಹೇಳಿದ್ದಾರೆ. ಕೆನಡಾ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ ಬಗ್ಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.