ನಾರಾಯಣ ಗುರು ಪಾಠವನ್ನು ಕೈ ಬಿಟ್ಟಿರುವುದು ಬಿಜೆಪಿ ಸರಕಾರದ ಹಿಂದುಳಿದ ವರ್ಗಗಳ ವಿರೋಧಿ ಧೋರಣೆಗೆ ಹಿಡಿದ ಕೈಗನ್ನಡಿ: SDPI

Prasthutha|

ಮಂಗಳೂರು: ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪುಸ್ತಕದಿಂದ ಸಮಾಜ ಸುಧಾರಕ ನಾರಾಯಣ ಗುರು ಕುರಿತಾದ ಪಾಠವನ್ನು ಕೈ ಬಿಟ್ಟಿರುವುದು ಬಿಜೆಪಿ ಸರಕಾರದ ಹಿಂದುಳಿದ ವರ್ಗಗಳ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಹೇಳಿದ್ದಾರೆ.

- Advertisement -

“ಹಿಂದೂ ನಾವೆಲ್ಲ ಒಂದು” ಎಂಬ ಘೋಷಣೆ ಮೊಳಗಿಸಿ ಚುನಾವಣಾ ಲಾಭ ಪಡೆಯುವ ಬಿಜೆಪಿ-ಸಂಘಪರಿವಾರಕ್ಕೆ ಹಿಂದೂ ಸಮಾಜದ ಹಿಂದುಳಿದ ವರ್ಗಗಳು ಸಹ್ಯವಲ್ಲ. ಈ ಹಿಂದೆ ಗಣರಾಜ್ಯೋತ್ಸವ ಪರೇಡ್ ನಲ್ಲೂ ನಾರಾಯಣ ಗುರು ಅವರ ಸ್ತಬ್ಧ ಚಿತ್ರ ಪ್ರದರ್ಶವನ್ನು ನಿರಾಕರಿಸಿ ದ್ರೋಹ ಬಗೆಯಲಾಗಿತ್ತು. ಕೇರಳದಲ್ಲಿ ಜಾತಿ ವ್ಯವಸ್ಥೆಯ ಬಲಿಪಶುಗಳಾಗಿದ್ದ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಶಿಕ್ಷಣ ಮತ್ತು ಇತರ ಹಕ್ಕುಗಳನ್ನು ವಂಚಿಸಲಾಗಿತ್ತು. ಮೇಲ್ಜಾತಿಯ ದೌರ್ಜನ್ಯಗಳ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಿ ಅವರ ಘನತೆಯ ಬದುಕಿಗಾಗಿ ಅಹರ್ನಿಶಿ ದುಡಿದವರು ನಾರಾಯಣ ಗುರುಗಳು. ನಾರಾಯಣ ಗುರುಗಳ ಸಮಾಜಮುಖಿ ಚಿಂತನೆಗಳು ಆರೆಸ್ಸೆಸ್ ಸಂಘಪರಿವಾರದ ವಿಷಕಾರಿ ಚಿಂತನೆಗಳಿಗೆ ವಿರುದ್ಧವಾಗಿವೆ. ಜಾತಿ ವ್ಯವಸ್ಥೆಯನ್ನು ಜೀವಂತವಾಗಿರಿಸಿಕೊಂಡು ಮೇಲ್ವರ್ಗದ ಪ್ರಾಬಲ್ಯವನ್ನು ಕಾಪಿಟ್ಟುಕೊಳ್ಳುವ ಷಡ್ಯಂತ್ರದ ಭಾಗವಾಗಿ ಇಂದು ಬಿಜೆಪಿ ಸರಕಾರ ನಾರಾಯಣ ಗುರುರಂತಹ ಜನಪರ ಚಿಂತಕರು ಮತ್ತು ಸಮಾಜ ಸುಧಾರಕರ ಆದರ್ಶಗಳನ್ನು ಮುಂದೆ ಸಾಗಿಸದಂತೆ ತಡೆಯುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ನಾರಾಯಣ ಗುರುಗಳ ಇತಿಹಾಸಕ್ಕೆ ಕತ್ತರಿ ಪ್ರಯೋಗ ನಡೆಸುವುದೆಂದರೆ, ಅದು ಹಿಂದುಳಿದ ವರ್ಗಗಳ ಸ್ವಾಭಿಮಾನದ ಬದುಕಿಗಾಗಿ ನಡೆಸಿದ ಹೋರಾಟದ ಕಥಾನಕದ ಮೂಲೋತ್ಪಾಟನೆಯಾಗಿದೆ. ಬಹುಸಂಖ್ಯಾತ ದಲಿತರು ಮತ್ತು  ಹಿಂದುಳಿದ ವರ್ಗಗಳು ಮೇಲ್ಜಾತಿಯ ಪ್ರಾಬಲ್ಯದ ಆರೆಸ್ಸೆಸ್-ಸಂಘಪರಿವಾರದ ದುಷ್ಟ ಸಂಚುಗಳನ್ನು ಅರಿತುಕೊಳ್ಳಬೇಕು. ಸಮಾಜ ಸುಧಾರಕರ ಸದಾಶಯಗಳ ಬದಲಿಗೆ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ದ್ವೇಷ, ಹಿಂಸಾ ಪ್ರವೃತ್ತಿ ಬಿತ್ತುವ ಸಂಘಪರಿವಾರದ ಇತಿಹಾಸವನ್ನು ಪಠ್ಯದಲ್ಲಿ ಅಳವಡಿಸುವುದರ ವಿರುದ್ಧ ಎಲ್ಲಾ ವರ್ಗಗಳು ಒಂದಾಗಿ ಹೋರಾಟ ನಡೆಸಬೇಕೆಂದು ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಕರೆ ನೀಡಿದ್ದಾರೆ.



Join Whatsapp