ನವದೆಹಲಿ: ನಾನು ಯಾವುದೇ ವೈಯಕ್ತಿಕ ಲಾಭ, ಹಿತಾಸಕ್ತಿಗಾಗಿ ರಾಜಕೀಯ ಮಾಡದ ಕಾರಣ ಬಿಜೆಪಿ ನನ್ನನ್ನು ಸ್ವಾಗತಿಸಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಹೇಳಿದ್ದಾರೆ. ಇತ್ತೀಚಿಗಷ್ಟೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಜೆಪಿ ನಡ್ಡಾ, ” ಪಂಜಾಬ್ನಲ್ಲಿ ನಂಬರ್ ಒನ್ ರಾಷ್ಟ್ರೀಯವಾದಿ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮುತ್ತಿದೆ. ಆದ್ದರಿಂದ ಪಕ್ಷವನ್ನು ಬಲಪಡಿಸಲು ರಾಷ್ಟ್ರೀಯವಾದಿ ಸಿದ್ಧಾಂತ ಹೊಂದಿರುವ ಎಲ್ಲಾ ನಾಯಕರು ಬಿಜೆಪಿಗೆ ಸೇರುವ ಅಗತ್ಯ ಇದೆ” ಎಂದು ಆಶಯ ವ್ಯಕ್ತಪಡಿಸಿದ್ದಾರೆ.