ಐಪಿಎಲ್ 2022 | ದಾಖಲೆ ಬರೆದ ಕೆ ಎಲ್ ರಾಹುಲ್- ಡಿ’ಕಾಕ್ ಜೋಡಿ

Prasthutha|

5ನೇ ಆವೃತ್ತಿಯ ಐಪಿಎಲ್‌ನ 66ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೊಸ ದಾಖಲೆ ನಿರ್ಮಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ, ಮುರಿಯದ ಮೊದಲನೇ ವಿಕೆಟ್‌ಗೆ 210 ರನ್ ಜೊತೆಯಾಟವಾಡುವ ಮೂಲಕ ಲಕ್ನೋ ತಂಡ ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

- Advertisement -

ಲಕ್ನೋ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆ ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ’ಕಾಕ್, ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದರು. ಕೋಲ್ಕತ್ತಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ’ಕಾಕ್, 70 ಎಸೆತಗಳಲ್ಲಿ 140 ರನ್ ಸಿಡಿಸಿ ಅಜೇಯರಾಗುಳಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ತಲಾ 10 ಸಿಕ್ಸರ್ ಮತ್ತು ಬೌಂಡರಿಗಳು ಒಳಗೊಂಡಿತ್ತು. ಕೇವಲ 59 ಎಸೆತಗಳಲ್ಲಿ 101 ರನ್‌ ಗಳಿಸಿದ ಕಾಕ್‌, ನಂತರದ 11 ಎಸೆತಗಳಲ್ಲಿ 39 ರನ್‌ ಚಚ್ಚಿದರು. ಐಪಿಎಲ್‌ನ ಇತಿಹಾಸದಲ್ಲಿಯೇ 3ನೇ ವೈಯಕ್ತಿಕ ಶ್ರೇಷ್ಠ ಮೊತ್ತ ಮತ್ತು ಅತಿ ಹೆಚ್ಚು ರನ್‌ ದಾಖಲಿಸಿದ ವಿಕೆಟ್‌ ಕೀಪರ್‌ ಬ್ಯಾಟರ್‌ ಎಂಬ ದಾಖಲೆಯನ್ನೂ ಡಿ’ಕಾಕ್‌ ತನ್ನದಾಗಿಸಿಕೊಂಡರು. ಡಿ’ಕಾಕ್‌ಗೆ ಉತ್ತಮ ಸಾಥ್ ನೀಡಿದ ರಾಹುಲ್, 51 ಎಸೆತಗಳಲ್ಲಿ 4 ಸಿಕ್ಸರ್ 3 ಬೌಂಡರಿಗಳ ನೆರವಿನೊಂದಿಗೆ ಅಜೇಯ 68 ರನ್ ಬಾರಿಸಿದರು.

210 ರನ್, ಇದುವರೆಗೂ ಐಪಿಎಲ್‌ನ ಯಾವುದೇ ಪಂದ್ಯದ ಮೊದಲ ವಿಕೆಟ್‌ನಲ್ಲಿ ದಾಖಲಾದ ಅತ್ಯಧಿಕ ಜೊತೆಯಾಟದ ಮೊತ್ತವಾಗಿದೆ. 2019ರಲ್ಲಿ ಆರ್‌ಸಿಬಿ ವಿರುದ್ದ ಹೈದರಾಬಾದ್ ಪರ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್ಸ್ಟೋವ್ ಗಳಿಸಿದ್ದ 185 ರನ್ ಇದುವರೆಗಿನ ದಾಖಲೆಯಾಗಿತ್ತು. ಐಪಿಎಲ್‌ನಲ್ಲಿ ಭರ್ತಿ 20 ಓವರ್ ಬ್ಯಾಟ್ ಮಾಡಿದ ಜೊತೆಯಾಟದ ದಾಖಲೆಯೂ ಈ ಮೂಲಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ’ಕಾಕ್ ಪಾಲಾಯಿತು. 

- Advertisement -

ಐಪಿಎಲ್‌ನಲ್ಲಿ ಅತ್ಯಧಿಕ ಜೊತೆಯಾಟದ ದಾಖಲೆ ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿದೆ. 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 2ನೇ  ವಿಕೆಟ್ ಜೊತೆಯಾಟದಲ್ಲಿ ಕೊಹ್ಲಿ-ಎಬಿಡಿ ಜೋಡಿ 229 ರನ್‌ಗಳಿಸಿದ್ದರು. 



Join Whatsapp