ಪೊಲೀಸರು ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಸಹಿಸಲ್ಲ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಅಪರಾಧಿ ಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧಗಳಲ್ಲಿ ಭಾಗಿಯಾಗುವುದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

- Advertisement -

ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಸಚಿವರು, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗೂ ಜೀವ ರಕ್ಷಣೆ ಹೊಣೆ ಹೊತ್ತಿರುವ ಪೊಲೀಸರು, ಆ ನಿಟ್ಟಿನಲ್ಲಿ ಹೊಣೆಗಾರಿಕೆ ಯನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.

ಪಿಎಸೈ ಅಕ್ರಮ ನೇಮಕಾತಿ ಯಲ್ಲಿ ತನಿಖೆ ನಡೆಸುತ್ತಿರುವ ವಿಷಯದಲ್ಲಿ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳ ಪಾತ್ರ ವಿರುವ ಬಗ್ಗೆ ಪ್ರಸ್ತಾಪಿಸಿ ವಿಷಾದಿಸಿದ ಸಚಿವರು, ಅಪರಾಧ ಪತ್ತೆ ಹಚ್ಚುವವರೆ ಅಪರಾಧ ಚಟುವಟಿಕೆ ಗಳಲ್ಲಿ ಭಾಗಿಯಾಗುವುದಾದರೆ ಸಾರ್ವಜನಿಕರ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

- Advertisement -

“ಸಾರ್ವಜನಿಕರು ಇಲಾಖೆಯ ಮೇಲೆ ಹೊಂದಿರುವ ಗೌರವ ಹಾಗೂ ನಂಬಿಕೆಯನ್ನು ಕಾಪಾಡಬೇಕು” ಎಂದು ಸಚಿವರು ತಿಳಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಕ್ತ ಚಂದನ, ಮರಗಳ ಕಳ್ಳ ಸಾಗಾಣಿಕೆ, ಅಕ್ರಮ ಮರಳುಗಾರಿಕೆ ಹಾಗೂ ಮಾದಕ ವಸ್ತುಗಳ ಜಾಲಗಳ ಬಗ್ಗೆ ದೂರುಗಳಿದ್ದು ಅಂಥಹ ಚಟುವಟಿಕೆಗಳ ನಿವಾರಣೆಗೆ ತೀವ್ರ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು. ಸರಗಳ್ಳತನ, ಮನೆ ದರೋಡೆ, ಕಳ್ಳತನ ಪ್ರಕರಣ ಗಳನ್ನು ತಡೆಗಟ್ಟಲು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ ಸಚಿವರು, ಜಿಲ್ಲೆಯಲ್ಲಿ ಡಾನ್ಸ್ ಬಾರ್ ಗಳು, ಮಟ್ಕಾ, ಮಾನವ ಕಳ್ಳ ಸಾಗಾಣಿಕೆ ಮತ್ತುವೇಶ್ಯಾವಾಟಿಕೆ ಅಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.

ಅಕ್ರಮ ವಾಗಿ ಬಂದು ನೆಲೆಸಿರುವ ಬಾಂಗ್ಲಾದೇಶ ನಾಗರಿಕರು ಹಾಗೂ ರೊಹಿಂಗ್ಯಾ ಮುಸ್ಲಿಮರನ್ನು ಗುರುತಿಸಲು, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ವರದಿ ನೀಡಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸಿ ಗಡಿಪಾರು ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಚಿವರು, ತಕ್ಷಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.  ಅಕ್ರಮ ಗೋವುಗಳ ಹತ್ಯೆ ಹಾಗೂ ಸಾಗಣಿಕೆ ವಿರುದ್ಧವೂ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭ ಪೊಲೀಸ್ ಮಹಾ ನಿರ್ದೇಶಕ ( ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಐಜಿ ಚಂದ್ರಶೇಖರ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ.ವಂಶಿ ಕೃಷ್ಣ ಮತ್ತು ಇತರ ಹಿರಿಯ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp