ವಿಧಾನಸಭಾ ಚುನಾವಣೆಗೆ ಸಿದ್ಧತೆ: ಪ್ರಚಾರಕ್ಕೆ 123 ವಾಹನಗಳನ್ನು ಖರೀದಿಸಿದ JDS

Prasthutha|

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷವು ಭರ್ಜರಿಯಾದ ಸಿದ್ದತೆ ನಡೆಸುತ್ತಿದ್ದು, ಪಕ್ಷದ ಮಹತ್ವಾಕಾಂಕ್ಷೆಯ ‘ಪಂಚರತ್ನ ಕಾರ್ಯಕ್ರಮ’ ಗಳ ಪ್ರಚಾರಕ್ಕೆ ರಾಜ್ಯಾದ್ಯಂತ 123 ಎಲ್ ಇಡಿ ವಾಹನಗಳು ಸಂಚಾರ ಮಾಡಲಿವೆ. ಇದಕ್ಕಾಗಿ 123 ಎಲ್ ಇಡಿ ವಾಹನಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖರೀದಿಸಿದ್ದಾರೆ. ಅವರಿಗೆ ಯಶವಂತಪುರದಲ್ಲಿರುವ ಅರವಿಂದ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಇಂದು ವಾಹನದ ಕೀ ಹಸ್ತಾಂತರ ಮಾಡಿದರು.

- Advertisement -

ಪಂಚರತ್ನ ಯೋಜನೆಗಳ ಪ್ರಚಾರಕ್ಕೆ ಖರೀದಿಸಿರುವ 123 ಟಾಟಾ ಏಸ್ ವಾಹನಗಳಿಗೆ ಯಶವಂತಪುರದ ಬಳಿ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ವಾಹನಗಳಿಗೆ ಎಲ್‌ಇಡಿ ಅಳವಡಿಕೆ ನಂತರ ಸಂಚಾರ ಆರಂಭವಾಗಲಿದ್ದು, 180 ಕ್ಷೇತ್ರಗಳಲ್ಲಿ ಸಂಚರಿಸಲಿರುವ 123 ಎಲ್‌ಇಡಿ ವಾಹನಗಳು ಪಂಚರತ್ನ ಯೋಜನೆಗಳ ಕಿರುಚಿತ್ರಗಳ ಪ್ರದರ್ಶನ ಮಾಡಲಿವೆ ಎನ್ನಲಾಗಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸಿದೆ. ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಹಾಗೂ ಮಹಿಳಾ – ಯುವ ಸಬಲೀಕರಣ; ಇವೇ ಪಂಚರತ್ನ ಕಾರ್ಯಕ್ರಮಗಳು. ಎಲ್ ಇಡಿ ವಾಹನಗಳ ಮೂಲಕ ಈ ಐದು ಕಾರ್ಯಕ್ರಮಗಳ ಮಾಹಿತಿಯನ್ನು ಜನತೆಗೆ ಕೊಡಲಾಗುವುದು ಎಂದು ಎಂದು ಹೇಳಿದರು.



Join Whatsapp