ದೇರಳಕಟ್ಟೆ: ಗ್ಯಾನ್ ವ್ಯಾಪಿ ಮಸೀದಿಯ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಮತ್ತು 1991 ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ದೇರಳಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್ ದೇಶದಲ್ಲಿ ಮಂದಿರ ಮಸೀದಿ ಹೆಸರಿನಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿರುವ ಸಮಾಜ ವಿರೋಧಿ , ದೇಶ ವಿರೋಧಿ ರಾಜಕಾರಣದ ವಿರುದ್ಧವಾಗಿ 1991 ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಬಾಬರೀ ಮಸೀದಿ ಹೊರತು ಪಡಿಸಿ ಉಳಿದ ಎಲ್ಲಾ ಮಂದಿರ, ಮಸೀದಿಗಳ ವಿಷಗಳಲ್ಲಿ 1947 ರಲ್ಲಿದ್ದ ಹಾಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಹೇಳಲಾಗಿದೆ. ಹೀಗಿದ್ದರೂ ಇದನ್ನು ಮರೆಮಾಚಿ ಗ್ಯಾನವ್ಯಾಪಿ ಮಸೀದಿಯ ಕೊಳದ ಕಾರಂಜಿಯನ್ನು ಶಿವಲಿಂಗ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ ಎಂದರು.
ಗ್ಯಾನ್ ವ್ಯಾಪಿ ಮಸೀದಿ ವಿರುದ್ಧದ ಷಡ್ಯಂತ್ರ ಖಂಡಿಸಿ ಎಸ್ಡಿಪಿಐ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಮಸೀದಿಯ ಸಂರಕ್ಷಣೆಗೆ ಪಕ್ಷ ಕಟಿಬದ್ಧವಾಗಿದ್ದು ಕಾನೂನು ಹೋರಾಟದ ಜೊತೆಗೆ ಬೀದಿ ಹೋರಾಟವನ್ನೂ ನಡೆಸಲಿದೆ ಎಂದರು. ಸಭೆಯನ್ನುದ್ದೇಶಿಸಿ ಸಜಿಪನಡು ಗ್ರಾಪಂ ಮಾಜಿ ಅಧ್ಯಕ್ಷ ನಾಸಿರ್ ಸಜಿಪ, ಎಸ್ಡಿಪಿಐ ದ.ಕ ಜಿಲ್ಲಾ ಸಮಿತಿ ಸದಸ್ಯ ಝಾಕಿರ್ ಉಳ್ಳಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಐಎಂಆರ್, ಕ್ಷೇತ್ರ ಸಮಿತಿ ಸದಸ್ಯ ಲತೀಫ್ ಕೋಡಿಜಾಲ್, ನೌಷಾದ್ ಕಲ್ಕಟ್ಟ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯೆ ಸೆಲಿಮಾಬಿ, ಪಾವೂರು ಗ್ರಾಪಂ ಅಧ್ಯಕ್ಷೆ ಕಮರುನ್ನಿಸಾ ನೌಫಲ್, ಸಜಿಪ ಗ್ರಾಪಂ ಅಧ್ಯಕ್ಷೆ ಫೌಜಿಯಾ ಮತ್ತಿತರರು ಉಪಸ್ಥಿತರಿದ್ದರು.