ಉಡುಪಿ: ಬಿಹಾರದಿಂದ ನಡೆಯುವ ರಾಜ್ಯಸಭಾ ಉಪಚುನಾವಣೆಗೆ ಕನ್ನಡಿಗ ಅನಿಲ್ ಹೆಗ್ಡೆ ಅವರನ್ನು ಜೆಡಿಯು ತನ್ನ ಅಭ್ಯರ್ಥಿ ಯಾಗಿ ಘೋಷಿಸಿದೆ.
ಮೇ 30ರಂದು ನಡೆಯುವ ಉಪಚುನಾವಣೆಯಲ್ಲಿ ಅನಿಲ್ ಹೆಗ್ಡೆ ಅವರ ಆಯ್ಕೆ ಖಚಿತವಾಗಿದೆ.
ಅನಿಲ್ ಹೆಗ್ಡೆ ಮೂಲತ: ಕುಂದಾಪುರ ತಾಲೂಕಿನ ಸಳ್ವಾಡಿಯವರು. ಇವರು ಮೊದಲು ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದು, ಬಳಿಕ ಅವರು ಬಿಹಾರದ ನಿತೀಶ್ ಕುಮಾರ್ ಅವರ ಸಂಪರ್ಕಕ್ಕೆ ಬಂದರು. ಜನತಾ ಪಾರ್ಟಿ ಎರಡು ತುಂಡಾದಾಗ ಜಾರ್ಜ್ ಫೆರ್ನಾಂಡೀಸ್ ಹಾಗೂ ನಿತೀಶ್ ಕುಮಾರ್ ಅವರೊಂದಿಗೆ ಜನತಾದಳ (ಸಂಯುಕ್ತ)ದಲ್ಲಿ ಉಳಿದು ಕೊಂಡರು. ಸುದೀರ್ಘ ಕಾಲ ಜಾರ್ಜ್ ಫೆರ್ನಾಂಡೀಸ್ ಅವರ ಕಾರ್ಯದರ್ಶಿಯಾಗಿದ್ದ ಅನಿಲ್ ಹೆಗ್ಡೆ, ಬಳಿಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ನಿಕಟವರ್ತಿ ಎನಿಸಿಕೊಂಡು ದಶಕಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರು ದಶಕಗಳಿಂದ ಬಿಹಾರದಲ್ಲೇ ನೆಲೆಸಿದ್ದಾರೆ.