ಲಖನೌ: ಜ್ಞಾನವಾಪಿ ಮಸೀದಿ ಮತ್ತು ಅದರ ಆವರಣವನ್ನು ಸಮೀಕ್ಷೆ ಮಾಡುವ ಆದೇಶ, ಸಮೀಕ್ಷೆಯ ಆಧಾರದಲ್ಲಿ ಆ ಪ್ರದೇಶವನ್ನು ಸೀಲ್ ಮಾಡುವಂತೆ ಆದೇಶ ನೀಡಿರುವುದು ನ್ಯಾಯಾಲಯ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾನೂನು ಮಂಡಳಿ, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಬಾವಿಯೊಂದಕ್ಕೆ ಸೀಲ್ ಮಾಡುವುದು ಅನ್ಯಾಯ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನ ಎಂದು ಪ್ರತಿಪಾದಿಸಿದೆ. ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಬಾವಿಯೊಳಗೆ ಶಿವಲಿಂಗವೊಂದು ಪತ್ತೆಯಾಗಿದೆ ಎಂದು ಹಿಂದೂ ವಕೀಲರೊಬ್ಬರು ಸಂವೇದನಾಶೀಲ ಹೇಳಿಕೆ ನೀಡಿದ ನಂತರ ಬಾವಿಯನ್ನು ಮುಚ್ಚಲಾಗಿತ್ತು.
ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಂಕೀರ್ಣದ ವೀಡಿಯೋಗ್ರಪಿ ಸಮೀಕ್ಷೆಯು ಸಾಕಷ್ಟು ಬಿಗಿ ಭದ್ರತೆಯ ನಡುವೆ ಸೋಮವಾರ ಮುಕ್ತಾಯಗೊಂಡಿದೆ. ಆವರಣದೊಳಗಿನ ಬಾವಿಯಲ್ಲಿ ಶಿವಲಿಂಗ ಕಂಡಬಂದಿದೆ ಎಂದು ಹಿಂದೂ ವಕೀಲರು ತಿಳಿಸಿದ ನಂತರ ಸಿವಿಲ್ ನ್ಯಾಯಾಲಯವು ಆ ಪ್ರದೇಶವನ್ನು ಸೀಲ್ ಮಾಡಲು ಮತ್ತು ಪ್ರಸಕ್ತ ಪ್ರದೇಶಕ್ಕೆ ಜನರ ಪ್ರವೇಶವನ್ನು ನಿಷೇಧಿಸಿ ಆದೇಶವನ್ನು ನೀಡಿದೆ.