ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ: ಕ್ಯಾಂಪಸ್ ಫ್ರಂಟ್ ಕಿಡಿ

Prasthutha|

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ-ಆರ್ ಎಸ್ ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೇವಾರ್ ಅವರ ಭಾಷಣವನ್ನು ಹತ್ತನೆಯ ತರಗತಿಯ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿದ್ದು, ಇದು ಶಿಕ್ಷಣದ ಕೇಸರೀಕರಣದ ಮುಂದುವರೆದ ಭಾಗವಾಗಿದ್ದು ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.

- Advertisement -


ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡ್ಗೆವಾರ್ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಗದ್ಯಪುಸ್ತಕದಲ್ಲಿ ಐದನೇ ಪಠ್ಯವಾಗಿ ಸೇರಿಸಲಾಗಿದೆ. ದೇಶಾದ್ಯಂತ ನರಮೇಧಗಳನ್ನು ನಡೆಸಿದ, ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಹೇಗೆ ಆದರ್ಶ ಪುರುಷನಾಗಲು ಸಾಧ್ಯವೆಂದು ಅವರು ಪ್ರಶ್ನಿಸಿದ್ದಾರೆ.


ಹೆಡ್ಗೇವಾರ್ ಅವರ ಶಿಕ್ಷಣದ ನಂತರ ಬಂಗಾಳದಲ್ಲಿ ಅನುಶೀಲನ್ ಸಮಿತಿ (ಹಿಂದೂ ಕ್ರಾಂತಿಕಾರಿಗಳು) ಅದರ ಭಾಗವಾಗಿದ್ದರು. 1920 ರ ದಶಕದಲ್ಲಿ ಕಾಂಗ್ರೆಸ್ ಗೆ ಸೇರಿದರು. ಆದರೆ ಹಿಂದೂ ಮತ್ತು ಮುಸಲ್ಮಾನರ ನಡುವೆ ಐಕ್ಯತೆಯ ನೀತಿಯನ್ನು ಕಾಂಗ್ರೆಸ್ ಪಾಲಿಸುತ್ತಿದೆಯೆಂದು ಅದನ್ನು ತೊರೆದರು. ಖಿಲಾಫತ್ ಹೋರಾಟದಿಂದಾಗಿ ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳುವಳಿಯನ್ನು ಹೆಡ್ಗೆವಾರ್ ಒಪ್ಪಲಿಲ್ಲ, ನಂತರ ಹಿಂದೂ ರಾಷ್ಟ್ರದ ಗುರಿಗಾಗಿ 1925 ರಲ್ಲಿ RSS ಅನ್ನು ಸ್ಥಾಪಿಸಿದರು. 1929 ರಲ್ಲಿ ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪೂರ್ಣ ಸ್ವರಾಜ್ ಅನ್ನು ಅಂಗೀಕರಿಸಿತು,

- Advertisement -


ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಅವರು ಭಗವಾಧ್ವಜವನ್ನು ಹಾರಿಸಲು ಆರ್ ಎಸ್ ಎಸ್ ಕಾರ್ಯಕರ್ತರನ್ನು ಒತ್ತಾಯಿಸಿದರು. ಸಂಘದ ಯಾವುದೇ ಜವಾಬ್ದಾರಿಯುತ ಕಾರ್ಯಕರ್ತರು 1930 ರ ದಶಕದಲ್ಲಿ ನಡೆದ ಗಾಂಧೀಜಿಯವರ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು ಎಂದು ಸಿಪಿ ಭಿಷಿಕರ್ ಎಂಬವರು ಬರೆದ ಹೆಡ್ಗೆವಾರ್ ರ ಅಧಿಕೃತ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ. ಇಂತಹ ದೇಶದ್ರೋಹಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಸಿದ್ದಾಂತದ ಹೇರಿಕೆಯೆಂಬುದು ಸ್ಪಷ್ಟವಾಗಿದೆ, ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ವಿರೋಧಿಸುತ್ತಿದೆ ಹಾಗೂ ಈ ಹೆಡ್ಗೆವಾರ್ ಭಾಷಣವನ್ನು ಶೀಘ್ರ ಪಠ್ಯಕ್ರಮದಿಂದ ಕೈ ಬಿಡಬೇಕೆಂದು ಅಥಾವುಲ್ಲ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.



Join Whatsapp