ಗ್ಯಾನ್ ವಾಪಿ ಮಸ್ಜಿದ್ ನಲ್ಲಿ ಮುಸ್ಲಿಮರ ಪ್ರಾರ್ಥನೆಗೆ ನಿರ್ಬಂಧ ವಿಧಿಸಿದ ಕೋರ್ಟ್ ಆದೇಶ ಏಕಪಕ್ಷೀಯ: ಪಾಪ್ಯುಲರ್ ಫ್ರಂಟ್

Prasthutha|

ನವದೆಹಲಿ: ಗ್ಯಾನ್ ವಾಪಿ ಮಸ್ಜಿದ್ ನಲ್ಲಿ ಮುಸ್ಲಿಮರಿಗೆ ಹೊಸ ನಿರ್ಬಂಧಗಳನ್ನು ವಿಧಿಸಿದ ವಾರಣಾಸಿ ಕೋರ್ಟ್ ಆದೇಶವು ‘ಏಕಪಕ್ಷೀಯ’ವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈ ಆದೇಶವು ನ್ಯಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.

- Advertisement -

ನ್ಯಾಯಾಲಯವು ಸರ್ವೇಯ ವಾದಗಳನ್ನು ಮುಖಬೆಲೆಯಾಗಿ ಪಡೆದುಕೊಂಡಂತೆ ತೋರುತ್ತದೆ ಮತ್ತು ಮಸ್ಜಿದ್ ಕೊಳದಲ್ಲಿ ಶಿವಲಿಂಗ ಪತ್ತೆ ಎಂಬ ಪ್ರತಿಪಾದನೆಯ ಸತ್ಯಾಸತ್ಯತೆಯ ಬಗ್ಗೆ ಯಾವುದೇ ಸೂಕ್ತ ಪರಿಶೋಧನೆ ನಡೆಸುವ ಮೊದಲೇ ಮುಸ್ಲಿಮರ ಪ್ರವೇಶ ಮತ್ತು ವುಝೂಗೆ ನಿರ್ಬಂಧ ವಿಧಿಸಿತು. ಇದು ವಿಚಿತ್ರವಾಗಿದೆ ಮತ್ತು ಈ ರೀತಿಯ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಹಾಗೂ ಸೂಕ್ಷ್ಮವಾದಂತಹ ವಿಚಾರಗಳಲ್ಲಿ ನ್ಯಾಯದ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿದೆ. ನ್ಯಾಯಾಲಯವು ಮಸ್ಜಿದ್ ಮೇಲೆ ಹಿಂದೂ ಪಕ್ಷಗಳ ಹಕ್ಕುಗಳನ್ನು ಬೆಂಬಲಿಸುತ್ತಿದೆ ಎಂದು ತೋರುತ್ತದೆ. ನ್ಯಾಯಾಂಗದ ಇಂತಹ ನಿಲುವು ದೇಶದ ಕೋಮು ಸೌಹಾರ್ದತೆಗೆ ಆಳವಾಗಿ ಹಾನಿಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991ರ ಗಂಭೀರ ಉಲ್ಲಂಘನೆಯಾದ ಅರ್ಜಿಗಳನ್ನು ನ್ಯಾಯಾಲಯವು ಮೊದಲಾಗಿ ಪರಿಗಣಿಸಬಾರದಿತ್ತು. ಹಿಂದುತ್ವ ಶಕ್ತಿಗಳು ಅಲ್ಪಸಂಖ್ಯಾತ ಪ್ರಾರ್ಥನಾ ಸ್ಥಳಗಳ ಮೇಲೆ ಇನ್ನಷ್ಟು ಹಕ್ಕು ಮಂಡಿಸಲು ಉತ್ತೇಜಿಸುವ ರೀತಿಯಲ್ಲಿ ಇಡೀ ಪ್ರಕರಣವು ಮುಂದೆ ಸಾಗುತ್ತಿದೆ. ನ್ಯಾಯ ಮತ್ತು ಕೋಮು ಸೌಹಾರ್ದತೆಯನ್ನು ಬಯಸುವ ಮಂದಿಗೆ ಇದು ತೀವ್ರ ಕಳವಳಕಾರಿಯಾದ ವಿಚಾರವಾಗಿದೆ. ನ್ಯಾಯಾಲಯವು ತಕ್ಷಣವೇ ತೀರ್ಪನ್ನು ಪರಿಷ್ಕರಿಸಬೇಕು ಎಂದು ಓ. ಎಂ ಎ ಸಲಾಂ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp