ಕೊಡಗಿನಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ ಬಜರಂಗದಳ ನಾಯಕರನ್ನು ಬಂಧಿಸಿ: ಸಿದ್ದರಾಮಯ್ಯ ಆಗ್ರಹ

Prasthutha|

►► ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಖಾತೆಗೆ ಸಚಿವರಿದ್ದಾರೆಯೇ? ಸರ್ಕಾರ ಜೀವಂತವಾಗಿದೆಯೇ ?

- Advertisement -

ಬೆಂಗಳೂರು: ಕೊಡಗಿನಲ್ಲಿ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಬಜರಂಗದಳ ನಾಯಕರನ್ನು ಬಂಧಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಕೊಡಗಿನ ಪೊನ್ನಂಪೇಟೆಯ ಖಾಸಗಿ ಶಾಲೆಯಲ್ಲಿ ಬಜರಂಗದಳ ಯುವಜನರಿಗೆ ಶಸ್ತ್ರತರಬೇತಿ ನೀಡಿ ಕಾನೂನಿಗೆ ಬಹಿರಂಗ ಸವಾಲು ಹಾಕಿದೆ. ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಖಾತೆಗೆ ಸಚಿವರಿದ್ದಾರೆಯೇ? ಸರ್ಕಾರ ಜೀವಂತವಾಗಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಜರಂಗದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಎಂ.ಎ. ಅಪ್ಪಚ್ಚು, ಕೆ.ಜಿ.ಬೋಪಯ್ಯ ಮತ್ತು ಸುಜ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಇವರ ಬದ್ಧತೆ ಸಂವಿಧಾನಕ್ಕೋ? ಬಜರಂಗದಳಕ್ಕೋ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಶಸ್ತ್ರಾಸ್ತ್ರ ತರಬೇತಿ‌‌ ಸಂಪೂರ್ಣವಾಗಿ ಕಾನೂನು ವಿರೋಧಿ ಚಟುವಟಿಕೆಯಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣ ಬಜರಂಗದಳದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

- Advertisement -

ಶಾಲೆಯ ಆವರಣದಲ್ಲಿ ಇಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕ್ರಮ‌ಕೈಗೊಳ್ಳಬೇಕು. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀರಾಮ ಸೇನೆ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮೊದಲಾದ ಸಂಘಟನೆಗಳ‌ ಜೊತೆ ತನ್ನ ಸಂಬಂಧ ಏನು ಎಂಬುದನ್ನು ಬಿಜೆಪಿ‌ ಮೊದಲು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಶಾಂತಿ ಕದಡಿಸಲು, ಭೀತಿ ಹುಟ್ಟಿಸಲು, ರಾಜ್ಯದ ಬಿಜೆಪಿ ಸರ್ಕಾರ ಭಜರಂಗದಳ, ಶ್ರೀರಾಮಸೇನೆಯಂತಹ ಕೋಮು‌ವಾದಿ ಸಂಘಟನೆಗಳಿಗೆ ವಿಶೇಷ ಅನುಮತಿ ನೀಡಿದೆಯೇ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.



Join Whatsapp