ಮಂಗಳೂರು: ಸುರತ್ಕಲ್ ನ ದೊಡ್ಡಕೊಪ್ಪಲು ಕಡಲ ಕಿನಾರೆಯಲ್ಲಿ ಕಂಡು ಬಂದಿರುವ ತೈಲ ಜಿಡ್ಡಿನ ಬಗ್ಗೆ ದ.ಕ.ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ನೀರಿನ ಮಾದರಿ ತಪಾಸಣೆಗೆ ರವಾನೆ ಮಾಡಲಾಗಿದೆ.
ಇದೀಗ ಡಿಡಿಎಂಎ, ಎಂಆರ್ ಪಿಎಲ್, ಎಂಇಝಡ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ, ಕಡಲ ಕಿನಾರೆಯಲ್ಲಿ ಪತ್ತೆಯಾಗಿರುವ ತೈಲ ಜಿಡ್ಡು ನೀರಿನ ಮಾದರಿಯನ್ನು ಸಂಗ್ರಹಿಸಿ, ತಪಾಸಣೆಗಾಗಿ ಸಿಎಂಎಫ್ ಆರ್ ಐಗೆ ಕಳುಹಿಸಲಿದ್ದಾರೆ. ಪತ್ತೆಯಾಗಿರುವ ತ್ಯಾಜ್ಯದ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಅದು ಪಾಚಿಯಂತೆ ಕಂಡು ಬರುತ್ತಿದೆ. ಸಾಮಾನ್ಯ ಮಳೆಗಾಲ ಪ್ರಾರಂಭಕ್ಕಿಂತ ಮೊದಲು ಕಂಡು ಬರುವ ಪಾಚಿಯಂತೆ ಕಂಡು ಬರುತ್ತಿದೆ.
ಹೆಚ್ಚಿನ ಗಾಳಿ ಹಾಗೂ ಅಲೆಗಳ ಘರ್ಷಣೆಯಿಂದ ಕಡಲಿನ ತಳಭಾಗದಲ್ಲಿರುವ ಕೆಸರು ಮೇಲಕ್ಕೆ ಬರುವುದರಿಂದ ಈ ರೀತಿ ಕಾಣಿಸಿಕೊಳ್ಳುತ್ತದೆ. ಆದರೂ ತೈಲ ಮತ್ತು ಗ್ರೀಸ್ ತಪಾಸಣೆಗಾಗಿ ತೈಲ ಜಿಡ್ಡು ನೀರಿನ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.