ಚನ್ನರಾಯಪಟ್ಟಣ: ಕೆಲ ದಿನಗಳಿಂದ ತಣ್ಣಗಾಗಿದ್ದ ಮಚ್ಚು-ಲಾಂಗು ಮತ್ತೆ ಸದ್ದು ಮಾಡಿದೆ. ಹಿರೀಸಾವೆ ಸಮೀಪದ ಚೋಳಂಬಳ್ಳಿ ಗ್ರಾಮದ ಬಳಿ ಬೈಕ್ನಲ್ಲಿ ಬರುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಸುತ್ತಿಗೆ, ಲಾಂಗ್ ಮೊದಲಾದ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಮರವಳ್ಳಿ ಗ್ರಾಮದ ರಾಮಕೃಷ್ಣ ಎಂಬುವರ ಮಗ ಸುದೀಪ್(25) ಕೊಲೆಯಾದ ಯುವಕ. ಮೇ 12 ರ ರಾತ್ರಿ 9.45 ರ ಸುಮಾರಿಗೆ ಹಿರೀಸಾವೆಯಿಂದ ಕಮರವಳ್ಳಿ ಗ್ರಾಮಕ್ಕೆ ಸುದೀಪ್ ಹಾಗೂ ಮಂಜುನಾಥ್ ಎಂಬವರು ಬೈಕ್ನಲ್ಲಿ ತೆರಳುತ್ತಿದ್ದರು. ಚೋಳಂಬಳ್ಳಿ ಗ್ರಾಮದ ಸಮೀಪ ತಲುಪಿದಾಗ ಹಿಂಬದಿಯಿಂದ ಬಂದ ಕಾರು ಸುದೀಪ್ ಚಾಲನೆ ಮಾಡುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಬೈಕ್ನಲ್ಲಿದ್ದ ಇಬ್ಬರು ಕೆಳಗ್ಗೆ ಬಿದ್ದಿದ್ದಾರೆ.
ಕಾರಿನಿಂದ ಇಳಿದ ಮೂವರು, ನೀನು ಇಲ್ಲಿಂದ ಓಡಿ ಹೋಗು, ಇಲ್ಲದಿದ್ದರೆ ನಿನ್ನನ್ನೂ ಮುಗಿಸುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಂದ ಕಳಿಸಿದ್ದಾರೆ. ಹೆದರಿ ಅಲ್ಲಿಂದ ಕಾಲ್ಕಿತ್ತ ಮಂಜುನಾಥ್ ತೆಂಗಿನ ತೋಟದ ಮರೆಯಲ್ಲಿ ನಿಂತಿದ್ದ.
ಕಾರಿನಲ್ಲಿದ್ದವರು ಸುದೀಪ್ನನ್ನು ಸುತ್ತುವರಿದು, ಸುತ್ತಿಗೆ ಮತ್ತು ಲಾಂಗ್ನಿಂದ ತಲೆ ಭಾಗಕ್ಕೆ ಬಲವಾಗಿ ಹೊಡೆದು ಹತ್ಯೆ ಮಾಡಿ ಅದೇ ಕಾರಿನಲ್ಲಿ ಚೋಳಂಬಳ್ಳಿ ಕಡೆಗೆ ಪರಾರಿಯಾಗಿದ್ದಾರೆ.
ಕೂಡಲೇ ಮಂಜುನಾಥ್, ಕೊಲೆಯಾದ ಯುವಕನ ತಂದೆ ರಾಮಕೃಷ್ಣ ಮೊದಲಾದವರಿಗೆ ಮಾಹಿತಿ ತಿಳಿಸಿದ್ದಾನೆ. ಆದರೆ ಅವರು ಬರುವಷ್ಟರಲ್ಲಿ ಸುದೀಪ್ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ಸಂಬಂಧಿಕರು ನೀಡಿದ ದೂರು ಆಧರಿಸಿ ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹತ್ಯೆಗೊಳಗಾದ ಸುದೀಪ್, ಈ ಹಿಂದೆ ನಡೆದಿದ್ದ ರೌಡಿ ಶೀಟರ್ ಲಿಂಗರಾಜು ಹತ್ಯೆ ಕೇಸ್ ನಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಎನ್ನಲಾಗಿದೆ. ಇದಾದ ಬಳಿಕ ಅಡುಗೆ ಕೆಲಸ ಮಾಡುತ್ತಿದ್ದ ಸುದೀಪ್, ಆಗಾಗ ತಮ್ಮದೇ ತಂಡದ ಜೊತೆಗೆ ಬೆಂಗಳೂರು ಮೊದಲಾದ ಕಡೆಗಳಿಗೆ ಹೋಗಿ ಬರುತ್ತಿದ್ದ. ಹತ್ಯೆಯಾದ ದಿನದಂದೂ ಬೆಂಗಳೂರಿಗೆ ಗೃಹ ಪ್ರವೇಶದ ಅಡುಗೆ ಕೆಲಸಕ್ಕೆ ಹೋಗಿ ಸ್ನೇಹಿತರೊಂದಿಗೆ ಹಿರೀಸಾವೆಗೆ ಬಂದಿದ್ದ. ಅದಾದ ಕೆಲವೇ ಗಂಟೆಗಳಲ್ಲಿ ಹತ್ಯೆಯಾಗಿದ್ದಾನೆ. ರೌಡಿ ಶೀಟರ್ ಲಿಂಗರಾಜು ಹತ್ಯೆಗೆ ಮಾಹಿತಿ ನೀಡಿದ್ದ ಎಂಬ ಕಾರಣಕ್ಕೆ ಸುದೀಪ್ ಹತ್ಯೆಯಾಗಿರುವ ಶಂಕೆ ಮೂಡಿದ್ದು, ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡ ರಚನೆ ಮಾಡಿದ್ದಾರೆ.