ಐಪಿಎಲ್ ಗೆ ನಿವೃತ್ತಿ ಘೋಷಿಸಿ, ಬಳಿಕ ಹಿಂಪಡೆದ ಅಂಬಟಿ ರಾಯುಡು !

Prasthutha|

ಮುಂಬೈ: ಐಪಿಎಲ್ ನಿಂದ ನಿವೃತ್ತಿಯಾಗುವುದಾಗಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಅಂಬಟಿ ರಾಯುಡು, ಕೆಲ ಹೊತ್ತಿನ ಬಳಿಕ ತಮ್ಮ ಟ್ವೀಟ್ ಅನ್ನು ಅಳಿಸಿಹಾಕಿದ್ದಾರೆ.

- Advertisement -

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಾವು ಆಡುತ್ತಿರುವ ಕೊನೆಯ ಟೂರ್ನಿ ಇದಾಗಿರಲಿದೆ ಎಂದು ಅಂಬಿ ರಾಯುಡು ಘೋಷಿಸಿದ್ದರು. ನಿವೃತ್ತಿ ಕುರಿತು ಟ್ವೀಟ್ ಮಾಡಿದ್ದ 36 ವರ್ಷದ ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟರ್, ʻಇದು ನನ್ನ ಕೊನೆಯ ಐಪಿಎಲ್ ಟೂರ್ನಿಯಾಗಿರಲಿದೆ ಎಂಬುವುದನ್ನು ತಿಳಿಸಲು ಸಂತೋಷವಾಗುತ್ತಿದೆ. ಕಳೆದ 13 ವರ್ಷಗಳಲ್ಲಿ ಎರಡು ಫ್ರಾಂಚೈಸಿಗಳಲ್ಲಿ ಸ್ಮರಣೀಯ ಸಮಯವನ್ನು ಕಳೆದಿದ್ದೇನೆ. ಇದಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆʼ ಎಂದಿದ್ದರು.

- Advertisement -


ಆದರೆ ಕೆಲ ಹೊತ್ತಿನ ಬಳಿಕ ತಮ್ಮ ಟ್ವೀಟ್ ಅನ್ನು ರಾಯುಡು ಡಿಲೀಟ್ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥ್, “ನಾನು ಅಂಬಟಿ ರಾಯುಡು ಜೊತೆ ಮಾತನಾಡಿದ್ದೇನೆ. ಅವರು ನಿವೃತ್ತಿಯಾಗುತ್ತಿಲ್ಲ. ಈ ಬಾರಿಯ ಟೂರ್ನಿಯಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ರಾಯುಡು ವಿಫರಾಗಿರುವುದರಿಂದ ಅವರು ನಿರಾಸೆಗೊಂಡಿದ್ದಾರೆ. ಹೀಗಾಗಿ ನಿವೃತ್ತಿಯನ್ನು ಘೋಷಿಸಿ ಟ್ವೀಟ್ ಮಾಡಿರಬಹುದು. ಟ್ವೀಟ್ ಬಳಿಕ ನಾವು ಅವರ ಜೊತೆ ಮಾತನಾಡಿದ್ದೇವೆ. ಆ ಬಳಿಕ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ. ಖಂಡಿತವಾಗಿಯೂ ರಾಯುಡು ನಿವೃತ್ತಿಯಾಗುವುದಿಲ್ಲ, ನಮ್ಮೊಂದಿಗಿರುತ್ತಾರೆ” ಎಂದು ವಿಶ್ವನಾಥನ್ ತಿಳಿಸಿದ್ದಾರೆ.


2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂಲಕ ರಾಯುಡು ಐಪಿಎಲ್ ವೃತ್ತಿ ಜೀವನ ಪ್ರಾರಂಭವಾಗಿತ್ತು. 2013ರ ಆವೃತ್ತಿಯ ಎಲ್ಲಾ ಪಂದ್ಯಗಳನ್ನೂ ಆಡಿದ್ದ ರಾಯುಡು, ಆ ವರ್ಷ ಮುಂಬೈ ಇಂಡಿಯನ್ಸ್ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಬಳಿಕ 2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟಕ್ಕೇರಿದಾಗ ರಾಯುಡು ತಂಡದ ಜೊತೆಗಿದ್ದರು. ಎಂಟು ಆವೃತ್ತಿಗಳಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರಾಯುಡು 105 ಇನ್ನಿಂಗ್ಸ್ ಗಳಿಂದ 27.1 ಸರಾಸರಿಯಲ್ಲಿ 2416 ರನ್ ಗಳಿಸಿದ್ದರು. ಇದರಲ್ಲಿ 14 ಅರ್ಧಶತಕಗಳು ಸೇರಿವೆ.


2018ರಲ್ಲಿ ಮುಂಬೈ ನಿಂದ ಚೆನ್ನೈ ಸೂಪರ್ ಕಿಂಗ್ಸ್ ಪಾಳಯ ಸೇರಿದ್ದ ಅಂಬಟಿ ರಾಯುಡು, ನಂತರದ ದಿನಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರ ಸ್ಥಂಭವಾಗಿದ್ದರು. ಇದುವರೆಗೂ ಸಿಎಸ್ ಕೆ ಪರ 67 ಇನ್ನಿಂಗ್ಸ್ ಆಡಿರುವ ರಾಯುಡು, 8 ಅರ್ಧಶತಕಗಳ ನೆರವಿನಿಂದ 32.2 ಸರಾಸರಿಯೊಂದಿಗೆ 1770 ರನ್ ಗಳಿಸಿದ್ದಾರೆ. ಈ ನಡುವೆ 2018 ಮತ್ತು 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದರು. ಚೆನ್ನೈ ತಂಡದಲ್ಲಿ ಬಲಿಷ್ಠ ಹೊಡೆತಗಳ ಮೂಲಕ ರಾಯುಡು ಅಭಿಮಾನಿಗಳ ಮನ ಗೆದ್ದಿದ್ದಾರೆ.


ಪ್ರಸಕ್ತ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್ ಹೋರಾಟದಿಂದ ಹೊರನಡೆದಿದೆ. ಇದುವರೆಗೂ 12 ಪಂದ್ಯಗಳನ್ನು ಆಡಿರುವ ಸಿಎಸ್ ಕೆ ಕೇವಲ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 8 ಪಂದ್ಯಗಳಲ್ಲಿ ಮುಗ್ಗರಿಸಿದೆ. -0.181 ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಹಿಂದೆ 2019ರಲ್ಲಿ, ಏಕದಿನ ವಿಶ್ವಕಪ್ ತಂಡದಿಂದ ಕೈ ಬಿಡಲಾದ ಬಳಿಕ, ರಾಯುಡು ಟ್ವಿಟರ್ ನಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಕೆಲ ದಿನಗಳ ನಂತರ ಹೈದರಾಬಾದ್ ಪರ ಆಡಲು ಮೈದಾನಕ್ಕೆ ಮರಳಿದ್ದರು.



Join Whatsapp