ಶ್ರೀನಗರ: ಕಾಶ್ಮೀರದಲ್ಲಿ ರಾಹುಲ್ ಭಟ್ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಸದಸ್ಯರನ್ನು ತಡೆಯಲು ಪೊಲೀಸರು ಲಘು ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದಾರೆ.
ಪೊಲೀಸರ ಮನವಿ ಬಳಿಕವೂ ಪ್ರತಿಭಟನಾಕಾರರು ಮೆರವಣಿಗೆ ನಿಲ್ಲಿಸಲು ನಿರಾಕರಿಸಿದರು. ಹೀಗಾಗಿ, ಲಾಠಿ ಪ್ರಹಾರ ನಡೆಸಿದ ಪೊಲೀಸರು, ಆಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಯೋತ್ಪಾದಕರು ಗುರುವಾರ ಬುದ್ಗಾಮ್ ಜಿಲ್ಲೆಯ ಚದೂರ ಗ್ರಾಮದ ತಹಸೀಲ್ದಾರ್ ಕಚೇರಿಗೆ ನುಗ್ಗಿ ಕಾಶ್ಮೀರ ಪಂಡಿತ ರಾಹುಲ್ ಭಟ್ ಎಂಬುವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಅವರು ಮೃತ ಪಟ್ಟಿದ್ದರು.
ಪ್ರತಿಭಟನಾಕಾರರ ವಿರುದ್ಧದ ಲಾಠಿ ಪ್ರಹಾರಕ್ಕೆ ಕಿಡಿಕಾರಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ, ನ್ಯಾಯಯುತ ಪ್ರತಿಭಟನೆ ಮೇಲೆ ಬಲಪ್ರಯೋಗ ನಾಚಿಕೆಗೇಡಿನ ಕೃತ್ಯ ಎಂದು ಟೀಕಿಸಿದ್ದಾರೆ.