ನವದೆಹಲಿ: ದೆಹಲಿಯಲ್ಲಿ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆ ಮತ್ತೆ ಮುಂದುವರಿದಿದ್ದು, ಆಗ್ನೇಯ ದಿಲ್ಲಿಯ ಮದನ್ ಪುರ ಖಾದರ್ ಎಂಬಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪಾಲಿಕೆ ಅಧಿಕಾರಿಗಳ ನಡೆಯ ವಿರುದ್ಧ ಸ್ಥಳೀಯ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವಐದು ಅಂತಸ್ತಿನ 2 ಕಟ್ಟಡಗಳನ್ನು ಕೆಡವಲಾಗುತ್ತಿದ್ದು, ಒಂದು ವರ್ಷಗಳಿಂದ ಕಟ್ಟಡ ನಿರ್ಮಾಣವಾಗುತ್ತಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಎಎಪಿ ಶಾಸಕರು ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೌರಕಾರ್ಮಿಕರು, ಬಡವರ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅತಿಕ್ರಮಣವನ್ನು ತೆರವುಗೊಳಿಸುತ್ತಿರುವುದಾಗಿ ನೀವು ಹೇಳುತ್ತಿದ್ದೀರಿ. ಅಕ್ರಮ ಕಟ್ಟಡ ತೆರವುಗೊಳಿಸಲು ನಾವು ಪಾಲಿಕೆಗೆ ಸಹಕರಿಸುತ್ತೇವೆ. ಆದರೆ ಬಡವರ ಮನೆಗಳನ್ನು ನೀವು ನೆಲಸಮಗೊಳಿಸುತ್ತಿದ್ದೀರಿ. ಈ ಪ್ರದೇಶದಲ್ಲಿ ಒಂದೇ ಒಂದು ಅತಿಕ್ರಮಣವೂ ಇಲ್ಲ ಎಂದು ಶಾಸಕ ಅಮಾನತುಲ್ಲಾ ಖಾನ್ ತಿಳಿಸಿದ್ದಾರೆ.
ಸದ್ಯ ಇಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಪೊಲೀಸರು ಮತ್ತು ಅರೆಸೇನಾಪಡೆ ಬಿಗಿ ಬಂದೋಬಸ್ತ್ ಕೈಗೊಂಡಿದೆ ಎಂದು ತಿಳಿದು ಬಂದಿದೆ.