ಬೈಕ್ ಅಪಘಾತ ಘಟನೆಗೆ ಹೊಸ ಟ್ವಿಸ್ಟ್; ಬೆಳಕಿಗೆ ಬಂದ ಕೊಲೆ ಪ್ರಕರಣ, ನಾಲ್ವರ ಬಂಧನ

Prasthutha|

ರಾಮನಗರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಭವಿಸಿದ ಬೈಕ್ ಅಪಘಾತದ ತನಿಖೆಯ ವೇಳೆ  ಬೆಂಗಳೂರಿನಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ರಹಸ್ಯ ಬಯಲಾಗಿದೆ.

- Advertisement -

ಬೆಂಗಳೂರಿನ ಶ್ವೇತಾ( 24) ಕೊಲೆಯಾದ ಮಹಿಳೆ. ಹಣಕಾಸು ವಿಚಾರವಾಗಿ ಕೊಲೆ ನಡೆದಿದೆ ಎನ್ನಲಾಗಿದೆ. ಪ್ರಕರಣದ  ಆರೋಪಿಗಳಾದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುತ್ತುರಾಯನ ನಗರ ನಿವಾಸಿ ದುರ್ಗಾ, ಆಕೆ ಪತಿ ರಘು, ಸ್ನೇಹಿತರಾದ ನಾಗರಾಜು ಹಾಗೂ ವಿನೋದ್ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಭಿ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಶ್ವೇತಾ ಹಾಗೂ ದುರ್ಗಾ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿದ್ದು, ಈ ವೇಳೆ ದುರ್ಗಾ ಬಡಿಗೆಯಿಂದ ಶ್ವೇತಾಳ ಮೇಲೆ ಹಲ್ಲೆ ನಡೆಸಿದ ಪರಿಣಾಮ  ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣವೇ ಈ ವಿಚಾರ ತಿಳಿದ ದುರ್ಗಾಳ ಪತಿ ರಘು ತನ್ನ ಸ್ನೇಹಿತ ಅಭಿ ಎಂಬಾತನನ್ನು ಸ್ಥಳಕ್ಕೆ ಕರೆಸಿದ್ದ. ಅಭಿ ಉಳಿದ ಇಬ್ಬರು ಆರೋಪಿಗಳನ್ನು ಕರೆಸಿಕೊಂಡು ಶವವನ್ನು ಚನ್ನಪಟ್ಟಣದ ಕೆರೆ ಇಲ್ಲವೇ ಶ್ರೀರಂಗಪಟ್ಟಣದ ಕಾವೇರಿ ನದಿ ಸೇತುವೆ ಕೆಳಗೆ ಎಸೆಯಲು ಸಂಚು ರೂಪಿಸಿದ್ದರು.

- Advertisement -

ಅದರಂತೆ ಎರಡು ಬೈಕ್ಗಳಲ್ಲಿ ದುರ್ಗಾ, ರಘು ಹಾಗೂ ಅಭಿ ಹೊರಟರೆ ಮತ್ತೊಂದು ಬೈಕ್ನಲ್ಲಿ ಶ್ವೇತಾಳ ಶವದೊಂದಿಗೆ ನಾಗರಾಜು ಹಾಗೂ ವಿನೋದ್ ಹೊರಟಿದ್ದರು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬರುವಾಗ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಉಬ್ಬಿನಲ್ಲಿ ಬೈಕ್ ಸ್ಕಿಡ್ ಆಗಿದೆ.

ಕೊಲೆಯಾದ ಶ್ವೇತಾ ಮತ್ತು ಆರೋಪಿಗಳು

ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಬೈಕ್ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಗಳು ನಂಬಿಸುವ ನಾಟಕವಾಡಿದ್ದಾರೆ. ಅನುಮಾನಗೊಂಡ ಪೊಲೀಸರು ಶವವನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.

‘ಆಕೆ ಸತ್ತು ಅದಾಗಲೇ ಅರ್ಧ ದಿನ ಕಳೆದಿದೆ’ಎಂದು ವೈದ್ಯರು ನೀಡಿದ ಮಾಹಿತಿಯನ್ನಾಧರಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮಹಿಳೆಯ ಶವವನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದುದಾಗಿ ಬಾಯಿಬಿಟ್ಟಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಚನ್ನಪಟ್ಟಣದಲ್ಲಿ ಬಂಧಿಸಿದ್ದಾರೆ.



Join Whatsapp