ಟೊಮ್ಯಾಟೊ ಫ್ಲೂ ತಡೆಗಟ್ಟಲು ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಸಚಿವ ಡಾ.ಕೆ.ಸುಧಾಕರ್

Prasthutha|

►► ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ

- Advertisement -

ಬೆಂಗಳೂರು: ಮಕ್ಕಳಲ್ಲಿ ಕಂಡುಬರುವ ಟೊಮ್ಯಾಟೊ ಫ್ಲೂ ರೋಗದ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಈಗಾಗಲೇ ಇರುವ ಕಾಯಿಲೆಯಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕೇರಳದಲ್ಲಿ ಈ ರೋಗದ ಪ್ರಕರಣಗಳು ಪತ್ತೆಯಾಗಿರುವುದರಿಂದ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇರಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ರಾಜ್ಯದ ಯಾವುದೇ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡುಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಈ ಜಿಲ್ಲೆಗಳೂ ಸೇರಿದಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಿಂದ ಲಿಖಿತ ನಿರ್ದೇಶನ ನೀಡಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.

ಅಪರೂಪದ ವೈರಸ್ ರೋಗವಾಗಿರುವ ಟೊಮ್ಯಾಟೊ ಜ್ವರದ ಪ್ರಕರಣಗಳು ಕೇರಳ ರಾಜ್ಯದ ಅರ್ಯಂಕಾರು, ಅಂಚಲ್ ಹಾಗೂ ನೆಡುವತೂರ್ ನಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ 5 ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಕಂಡುಬರುವ ಈ ರೋಗ, ಚರ್ಮದ ತುರಿಕೆ, ಕೆಂಪಾಗುವುದು, ನೀರಡಿಕೆ ಮೊದಲಾದ ಲಕ್ಷಣಗಳನ್ನು ಹೊಂದಿದೆ. ತೀವ್ರ ಜ್ವರ, ಮೈ ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳೂ ಕಂಡುಬರುತ್ತವೆ.



Join Whatsapp