ರವೀಂದ್ರನಾಥ್ ರಾಜೀನಾಮೆ: ರಾಜ್ಯ ಬಿಜೆಪಿ ಸರ್ಕಾರ ದಲಿತ ವಿರೋಧಿ ಎಂಬುದಕ್ಕೆ ಸಾಕ್ಷಿ ಎಂದ ಡಿಕೆಶಿ

Prasthutha|

ಬೆಂಗಳೂರು:‘ಶೋಷಣೆಗೆ ಒಳಗಾಗಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ರಕ್ಷಣೆ ನೀಡಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ ಡಾ. ರವೀಂದ್ರನಾಥ್ ಅವರ ರಾಜೀನಾಮೆ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರ ದಲಿತ ವಿರೋಧಿ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಭು ಚೌಹಾಣ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೆ ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ರವೀಂದ್ರನಾಥ್ ಅವರು ನೊಟೀಸ್ ಜಾರಿ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಗುಸು, ಗುಸು ಮಾಹಿತಿ ಬಂದಿದೆ. ಇದರಿಂದ ಬೇಸತ್ತಿರುವ ರವೀಂದ್ರನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.


ಕೂಡಲೇ ರಾಜ್ಯ ಸರ್ಕಾರ ವರ್ಗಾವಣೆ ನಿರ್ಧಾರವನ್ನು ರದ್ದು ಮಾಡಿ, ಈ ಅಧಿಕಾರಿಯನ್ನು ಮತ್ತೆ ಅದೇ ಹುದ್ದೆಗೆ ನೇಮಿಸಿ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣಗಳ ಪಾರದರ್ಶಕ ಹಾಗೂ ನ್ಯಾಯಬದ್ಧ ವಿಚಾರಣೆಗೆ ಅವಕಾಶ ಮಾಡಿಕೊಡಬೇಕು ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು. ತಪ್ಪು ಯಾರೇ ಮಾಡಿದರೂ ತಪ್ಪೇ. ಹೀಗಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಸಚಿವರು ಹಾಗೂ ರಾಜಕೀಯ ಕಾರ್ಯದರ್ಶಿಗಳನ್ನು ಸರ್ಕಾರ ಕೂಡಲೇ ಸರ್ಕಾರದ ಜವಾಬ್ದಾರಿ ಸ್ಥಾನದಿಂದ ಕೈಬಿಡಬೇಕು. ಪ್ರಭು ಚೌಹಾಣ್ ಅವರು ಮಹಾರಾಷ್ಟ್ರದಲ್ಲಿ ಜನಿಸಿದ್ದು, ಅವರು ಪರಿಶಿಷ್ಟ ಜಾತಿಗೆ ಬರುವುದಿಲ್ಲ. ಆದರೆ ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಪ್ರಕರಣವನ್ನು ಚುನಾವಣೆವರೆಗೂ ಮುಂದೂಡುವ ಪ್ರಯತ್ನ ಮಾಡಬಾರದು. ರವೀಂದ್ರನಾಥ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಸಮಾಜ ಕಲ್ಯಾಣ ಸಚಿವಾಲಯದಲ್ಲಿರುವ ರೂಲ್ 8 ಅನ್ನು ರಕ್ಷಣೆ ಮಾಡಬೇಕು, ಆಗ ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.

- Advertisement -


ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿರುವ 1097 ಪ್ರಕರಣ ದಾಖಲಾಗಿದ್ದು, 111 ಪ್ರಕರಣಗಳಲ್ಲಿ ತಹಶೀಲ್ದಾರರು, 108 ಕಂದಾಯ ಇನ್ಸ ಪೆಕ್ಟರ್, 111 ಗ್ರಾಮ ಲೆಕ್ಕಿಗರು ನಕಲಿ ಪ್ರಮಾಣ ಪತ್ರೆ ತೆಗೆದುಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿವೆ. ಇನ್ನು 590 ಪ್ರಕರಣಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾಗಿದ್ದು, ಜಿಲ್ಲಾಧಿಕಾರಿಗಳ ಬಳಿ ಆ ಪ್ರಕರಣಗಳು ಬಾಕಿ ಉಳಿದಿವೆ. 5 ಸಾವಿರ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದು, ಪ್ರತಿ ವರ್ಷ 1600 ಕೇಸ್ ಗಳು ದಾಖಲಾಗುತ್ತಿವೆ. 200 ಕ್ಕೂ ಹೆಚ್ಚು ಪ್ರಕರಣಗಳು ತನಿಖಾ ಹಂತದಲ್ಲಿವೆ. ಇಂತಹ ಪ್ರಕರಣಗಳ ವಿಚಾರಣೆಯನ್ನು 60 ದಿನಗಳಲ್ಲಿ ಮುಗಿಸಬೇಕು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಇನ್ನು ಶಿಕ್ಷೆ ಪ್ರಮಾಣ ಪರಿಶಿಷ್ಟ ಜಾತಿ ಪ್ರಕರಣಗಳಲ್ಲಿ ಶೇ.16 ಹಾಗೂ ಪರಿಶಿಷ್ಟ ಪಂಗಡದ ಶೇ. 3 ರಷ್ಟು ಮಾತ್ರ ಇದೆ ಎಂದು ಶಿವಕುಮಾರ್ ಹೇಳಿದರು.

ರೂಲ್ 8 ದೌರ್ಜನ್ಯ ತಡೆ ಕಾಯ್ದೆಯಲ್ಲಿ ಪ್ರಾಮಾಣಿಕ ತನಿಖೆ ಮಾಡಬೇಕು ಎಂಬ ಜವಾಬ್ದಾರಿಯನ್ನು ಕೊಡಬೇಕು ಎಂದು ರವೀಂದ್ರನಾಥ್ ಅವರು ಬೇಡಿಕೆ ಇಟ್ಟಿದ್ದಾರೆ. ಇನ್ನು ಒಂದು ವರ್ಷ ಎಂಟು ತಿಂಗಳು ಅವರ ಕಾರ್ಯಾವಧಿ ಇದ್ದು, ಸಚಿವರು ಹಾಗೂ ರಾಜಕೀಯ ಕಾರ್ಯದರ್ಶಿಗಳ ರಕ್ಷಣೆ ಮಾಡಲು ಅವರ ಮೇಲೆ ರಾಜಕೀಯ ಒತ್ತಡ ಹಾಕಲಾಗಿದೆ. ಪ್ರಭು ಚೌಹಾಣ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಪ್ರಕರಣವನ್ನು 3 ತಿಂಗಳಲ್ಲಿ ಇತ್ಯರ್ಥ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನವಿದೆ. ಆದರೆ ಎರಡು ವರ್ಷವಾದರೂ ಈವರೆಗೂ ತೀರ್ಮಾನ ಮಾಡಲಾಗಿಲ್ಲ. ಇನ್ನು ಇತ್ತೀಚೆಗೆ ರೇಣುಕಾಚಾರ್ಯ ಅವರು ತಮ್ಮ ಕುಟುಂಬ ಸದಸ್ಯರು ಬೇಡ ಜಂಗಮ ಎಂಬ ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿರುವುದು ಸತ್ಯ, ಆದರೆ ಯಾವುದೇ ಫಲಾನುಭವ ಪಡೆದಿಲ್ಲ ಎಂದು ಹೇಳಿದ್ದಾರೆ.


ದೊಡ್ಡ ಸ್ಥಾನದಲ್ಲಿರುವ ಯಾವುದೇ ಅಧಿಕಾರಿ, ರಾಜಕಾರಣಿಯಾಗಲಿ ಇಂತಹ ತಪ್ಪು ಮಾಡಿದರೂ ತಪ್ಪೇ. ಯಾರು ನಕಲಿ ಪ್ರಮಾಣ ಪತ್ರ ಪಡೆದಿದ್ದಾರೋ ಅವರಿಗೂ ಶಿಕ್ಷೆ ಆಗಬೇಕು, ನಕಲಿ ಪ್ರಮಾಣ ಪತ್ರ ನೀಡಿದವರಿಗೂ ಶಿಕ್ಷೆ ಆಗಬೇಕು ಎಂಬುದು ಕಾಂಗ್ರೆಸ್ ಒತ್ತಾಯ. ರವೀಂದ್ರನಾಥ್ ಅವರಂತಹ ಪ್ರಾಮಾಣಿಕ, ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ರಕ್ಷಣೆ ನೀಡುವ ಅಧಿಕಾರಿಗಳಿಗೆ ಬಿಜೆಪಿ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶೋಷಣೆಗೆ ಒಳಗಾದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ರಕ್ಷಣೆ ನೀಡುವುದು ನಮ್ಮ ಬದ್ಧತೆ. ಇದಕ್ಕಾಗಿ ವಿಶೇಷ ಕಾನೂನು ಇದ್ದು, ಇದರ ದುರುಪಯೋಗಕ್ಕೇ ಒಂದು ದೊಡ್ಡ ವರ್ಗ ಪ್ರಯತ್ನಿಸುತ್ತಿದೆ. ಈ ವ್ಯವಸ್ಥೆ ಸರಿಪಡಿಸುವ ಪ್ರಕ್ರಿಯೆ ಮೇಲಿಂದ ಆರಂಭವಾಗಬೇಕು. ಪಾರದರ್ಶಕ ತನಿಖೆ ಮಾಡಬೇಕು. ಸರ್ಕಾರ ಇಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಉಳಿಸಿಕೊಳ್ಳಬೇಕು, ಆ ಮೂಲಕ ತನ್ನ ಘನತೆ ಹೆಚ್ಚಿಸಿಕೊಳ್ಳಬೇಕು. ಆದರೆ ಸರ್ಕಾರದ ನಿಲುವು ನೋಡುತ್ತಿದ್ದರೆ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ರಂಗದಲ್ಲೂ ಅಕ್ರಮಗಳು ತಾಂಡವವಾಡುತ್ತಿದೆ. ದಿನಕ್ಕೊಂದು ಅಕ್ರಮ ಬಯಲಿಗೆ ಬರುತ್ತಿದೆ. ಕೇವಲ ಹಣದಲ್ಲಿ ಮಾತ್ರವಲ್ಲ, ಜಾತಿ ವ್ಯವಸ್ಥೆ ಸೇರಿದಂತೆ ಎಲ್ಲದರಲ್ಲೂ ಅಕ್ರಮ ಮಾಡುತ್ತಿದೆ.’

ರವೀಂದ್ರನಾಥ್ ಅವರು ಮಾಜಿ ಐಜಿಪಿ ಕೆಂಪಯ್ಯ ಅವರಿಗೆ ನೊಟೀಸ್ ನೀಡಿದ್ದರು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ಬೊಮ್ಮಾಯಿ ಅವರು ಸೇರಿ ಇವರ ವರ್ಗಾವಣೆ ಮಾಡಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರೇ ತಪ್ಪು ಮಾಡಿರಲಿ, ನಮ್ಮವರೇ ಆಗಲಿ, ಬೇರೆಯವರಾಗಲಿ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ಕೆಂಪಯ್ಯ ಅವರಿಗೆ ನೊಟೀಸ್ ನೀಡಿದ್ದಾರೆ ಎಂದಾದರೆ ಅವರು ತಮ್ಮ ಜವಾಬ್ದಾರಿಯನ್ನು ಮಾಡುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ. ಈ ವಿಚಾರದಲ್ಲಿ ನ್ಯಾಯಬದ್ಧ ತನಿಖೆ ಆಗಲಿ. ನಾವು ಆ ರೀತಿ ಒತ್ತಡ ಹಾಕಿದ್ದರೆ ಅದನ್ನು ಅವರು ತಿಳಿಸಲಿ. ಬೇರೆಯವರು ಸಾವಿರ ಹೇಳಬಹುದು, ಆದರೆ ಸರ್ಕಾರ ನಡೆಸುತ್ತಿರುವವರು ಅವರು. ವಿರೋಧ ಪಕ್ಷದವರು ಹೇಳಿದನ್ನೆಲ್ಲಾ ಸರ್ಕಾರ ಕೇಳುತ್ತದೆಯೇ? ಅವರು ತಮ್ಮ ರಾಜಕೀಯ ಅನುಕೂಲಕ್ಕೆ ಹೇಗೆ ಬೇಕೋ ಹಾಗೆ ಮಾಡುತ್ತಾರೆ’ ಎಂದು ಉತ್ತರಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಳಿದ ಪ್ರಶ್ನೆಗೆ, ‘ರಾಜ್ಯ ಸರ್ಕಾರ ಯಾವಾಗ ಚುನಾವಣೆಗೆ ಆದೇಶ ಮಾಡುತ್ತದೆಯೋ ಅದಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ. ಇತ್ತೀಚೆಗೆ ಮೀಸಲಾತಿ ವಿಚಾರವಾಗಿ ಸಮಿತಿ ಮಾಡಿದ್ದು, ಆದಷ್ಟು ಬೇಗ ತೀರ್ಮಾನ ಮಾಡಿ ಚುನಾವಣೆ ಮಾಡಲಿ’ ಎಂದು ಉತ್ತರಿಸಿದರು.
ಇನ್ನು ಅಶ್ವತ್ಥ್ ನಾರಾಯಣ್ ಅವರು ಎಂ.ಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಗ್ಗೆ ತಮ್ಮ ಹೇಳಿಕೆಗೆ ಪಾಟೀಲ್ ಅವರು ಕೊಟ್ಟಿರುವ ಪ್ರತಿಕ್ರಿಯೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಾಧ್ಯಮಗಳು ಬಂದು ಅಶ್ವತ್ಥ್ ನಾರಾಯಣ್ ಅವರು ಎಂ.ಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನೆ ಹೇಳಿದವು. ಮಾಧ್ಯಮಗಳು ಹೇದ್ದಕ್ಕೆ ನಾನು ಆ ರೀತಿ ಪ್ರತಿಕ್ರಿಯೆ ನೀಡಿದ್ದೇನೆ. ಉಳಿದಂತೆ ಬೇರೇನೂ ಗೊತ್ತಿಲ್ಲ. ಈಗ ಆ ವಿಚಾರ ಚರ್ಚೆ ಬೇಡ. ಶೇ.24 ರಷ್ಟು ಜನರ ರಕ್ಷಣೆಗೆ ನಿಂತಿರುವ ಅಧಿಕಾರಿ ಮೇಲೆ ನಡೆಸಿರುವ ಷಡ್ಯಂತ್ರದ ಬಗ್ಗೆ ಚರ್ಚೆ ಮಾಡೋಣ’ ಎಂದು ಡಿಕೆಶಿ ಹೇಳಿದರು.



Join Whatsapp