ಶ್ರೀಲಂಕಾ: ಭುಗಿಲೆದ್ದ ಹಿಂಸಾಚಾರದ ಟಾಪ್ 10 ಅಪ್ ಡೇಟ್ಸ್

Prasthutha|

ಕೊಲಂಬೋ: ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಪಕ್ಸೆ ರಾಜೀನಾಮೆ ನಂತರ ದೇಶದ ಅನೇಕ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಳೆದ ವಾರ ರಾಷ್ಟ್ರಪತಿಗಳು ಘೋಷಿಸಿದ ತುರ್ತು ಪರಿಸ್ಥಿತಿಯ ಮೇಲೆ ಬುಧವಾರದವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿದೆ.

- Advertisement -

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಇಂದು ಟಾಪ್ 10 ಅಪ್ಡೇಟ್ ಗಳು ಇಲ್ಲಿವೆ:

➡ಅಧ್ಯಕ್ಷ ಗೊಟಬಯಾ ಅವರ ಕಚೇರಿಯ ಹೊರಗೆ ಅವರ ಬೆಂಬಲಿಗರು ಆಡಳಿತ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ ಸುಮಾರು 173 ಜನರು ಗಾಯಗೊಂಡಿದ್ದಾರೆ. ಗಾಯಗಳು ಅಥವಾ ಅಶ್ರುವಾಯು ಉಸಿರಾಟಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ಕನಿಷ್ಠ ಒಂಬತ್ತು ಜನರನ್ನು ಕೊಲಂಬೊದ ರಾಷ್ಟ್ರೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಒಂದೇ ದಿನ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತುಕೊರಾಲೆ ಸೇರಿದಂತೆ ಕನಿಷ್ಠ ಐವರು ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ.

- Advertisement -

➡ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ಸೋಮವಾರ ಪ್ರಧಾನಿಯ ಅಧಿಕೃತ ನಿವಾಸದ ಹೊರಗೆ ವಾರಗಟ್ಟಲೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿ, ಮರ ಮತ್ತು ಕಬ್ಬಿಣದ ರಾಡ್ ಗಳಿಂದ ಹೊಡೆದಿದ್ದಾರೆ ಮತ್ತು ಅವರ ಶಿಬಿರಗಳಿಗೆ ಬೆಂಕಿ ಹಚ್ಚಿದ್ದಾರೆ.

➡ಕೊಲಂಬೊದಿಂದ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ (20 ಮೈಲಿ) ದೂರದಲ್ಲಿರುವ ನಿಟ್ಟಂಬುವಾದಲ್ಲಿ ಅತುಕೊರಾಲೆ ಮತ್ತು ಅವರ ಅಂಗರಕ್ಷಕನನ್ನು ಹತ್ಯೆಗೈಯಲಾಗಿದೆ. ಅವರ ಅಂಗರಕ್ಷಕರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

➡ ಹಂಬಂಟೋಟಾದಲ್ಲಿನ ರಾಜಪಕ್ಸರ ಪೂರ್ವಜರ ಮನೆಗೆ  ಪ್ರತಿಭಟನಾಕಾರರ ಗುಂಪೊಂದು ಬೆಂಕಿ ಹಚ್ಚಿದೆ. ಹಂಬಂಟೋಟಾ ನಗರದ ಮೆದಮುಲನಾದಲ್ಲಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಇಡೀ ಮನೆಯನ್ನು ಪ್ರತಿಭಟನಾಕಾರರು ಸುಟ್ಟುಹಾಕಿದ್ದಾರೆ.

➡ಆಡಳಿತಾರೂಢ ಮೈತ್ರಿಕೂಟದ ಸಚಿವರು ಮತ್ತು ಶಾಸಕರ ಹಲವಾರು ಆಸ್ತಿಗಳನ್ನು ಪ್ರತಿಭಟನಾಕಾರರು ನಾಶಪಡಿಸಿದ್ದಾರೆ. ಪ್ರತಿಭಟನಾಕಾರರು ಬದುಲ್ಲಾ ಜಿಲ್ಲೆಯ ಸಂಸದ ತಿಸ್ಸಾ ಕುಟ್ಟಿಯಾರಾಚ್ ಅವರ ಮನೆಗೂ ಬೆಂಕಿ ಹಚ್ಚಿದ್ದಾರೆ. ಅವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮಾಜಿ ಸಚಿವ ಜಾನ್ ಸ್ಟನ್ ಫರ್ನಾಂಡೊ ಅವರ ಕಚೇರಿಗಳ ಮೇಲೂ ದಾಳಿ ನಡೆದಿದ್ದು ಅವರ ಮಾಲೀಕತ್ವದ ಮದ್ಯದಂಗಡಿಗೆ ಬೆಂಕಿ ಹಚ್ಚಲಾಯಿತು.

➡ನೆಗೊಂಬೊದಲ್ಲಿರುವ ಮಾಜಿ ಸಚಿವ ನಿಮಲ್ ಲಾಂಜಾ ಅವರ ಮನೆ, ಮೇಯರ್ ಸಮನ್ ಲಾಲ್ ಫರ್ನಾಂಡೊ ಅವರ ಮೊರಾಟುವಾ ನಿವಾಸ, ಕೊಚಿಕಾಡೆಯಲ್ಲಿರುವ ಶಾಸಕಿ ಅರುಂಡಿಕಾ ಫರ್ನಾಂಡೊ ಅವರ ಮನೆ, ಬಂಡರವೇಲಾದ ಶಾಸಕಿ ತಿಸ್ಸಾ ಕುಟ್ಟಿಯರಾಚಿ ಅವರಿಗೆ ಸೇರಿದ ಚಿಲ್ಲರೆ ಅಂಗಡಿ ಮತ್ತು ಕೆಗಳೆಯಲ್ಲಿರುವ ಶಾಸಕ ಮಹಿಪಾಲ ಹೆರಾತ್ ಅವರ ನಿವಾಸಕ್ಕೆ ಗುಂಪು ಬೆಂಕಿ ಹಚ್ಚಿದೆ. ಕೊಲಂಬೊದ ವೋಕ್ಸ್ಹಾಲ್ ರಸ್ತೆಯಲ್ಲಿರುವ ಆಡಳಿತ ಪಕ್ಷದ ಟ್ರೇಡ್ ಲೀಡರ್ ಮಹಿಂದಾ ಕಹಾಂಡಗಮಗೆ ಅವರ ನಿವಾಸದ ಮೇಲೂ ಗುಂಪು ದಾಳಿ ನಡೆಸಿದೆ.

➡ವೀರಕೇತಿಯಾ ಪ್ರದೇಶೀಯ ಸಭಾದ ಅಧ್ಯಕ್ಷರ ನಿವಾಸದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

➡ಅಮೆರಿಕವು ಹಿಂಸಾಚಾರವನ್ನು ಖಂಡಿಸಿದ್ದು, ತುರ್ತು ಪರಿಸ್ಥಿತಿಯ ಘೋಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಪರಿಹಾರಗಳನ್ನು ಗುರುತಿಸಲು ಮತ್ತು ಅನುಷ್ಠಾನಗೊಳಿಸಲು ಮತ್ತು ವಿದ್ಯುತ್, ಆಹಾರ ಮತ್ತು ಔಷಧ ಕೊರತೆ ಸೇರಿದಂತೆ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಶ್ರೀಲಂಕಾದ ಜನರ ಅಸಮಾಧಾನವನ್ನು ಪರಿಹರಿಸಲು ತ್ವರಿತವಾಗಿ ಕೆಲಸ ಮಾಡುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ವಾಷಿಂಗ್ಟನ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ದೇಶದ ಆರ್ಥಿಕ ಮತ್ತು ರಾಜಕೀಯ ಸವಾಲುಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಂಡುಹಿಡಿಯುವತ್ತ ಗಮನ ಹರಿಸುವಂತೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಶ್ರೀಲಂಕಾವನ್ನು ಒತ್ತಾಯಿಸಿದೆ.

➡ಯುರೋಪಿಯನ್ ಯೂನಿಯನ್ ಮತ್ತು ವಿಂಬಲ್ಡನ್ನ ಬ್ರಿಟಿಷ್ ಸಚಿವ ಲಾರ್ಡ್ ತಾರಿಖ್ ಅಹ್ಮದ್ ಸೋಮವಾರದ ಹಿಂಸಾಚಾರವನ್ನು ಖಂಡಿಸಿದ್ದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರನ್ನು ನ್ಯಾಯದ ಮುಂದೆ ತರುವಂತೆ ಸರ್ಕಾರಕ್ಕೆ ಕರೆ ನೀಡಿದ್ದಾರೆ.

➡ಹಾಲಿನಿಂದ ಹಿಡಿದು ಇಂಧನದವರೆಗೆ ಎಲ್ಲದರ ಆಮದು ಕುಸಿದಿದೆ, ಇದು ಭೀಕರ ಆಹಾರ ಕೊರತೆ ಮತ್ತು ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ. ಆಸ್ಪತ್ರೆಗಳಲ್ಲಿ ಜೀವ ಉಳಿಸುವ ಔಷಧಿಗಳ ಕೊರತೆಯ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.



Join Whatsapp