ಹಾಸನ ಜಿಲ್ಲೆಗೂ ವ್ಯಾಪಿಸಿದ ಪಿಎಸ್ ಐ ಪರೀಕ್ಷೆ ಅಕ್ರಮ: ಸಿಐಡಿ ತಂಡದಿಂದ ತೀವ್ರ ವಿಚಾರಣೆ

Prasthutha|

 ಹಾಸನ: ಪಿಎಸ್ ಐ ನೇಮಕ ಅಕ್ರಮ ಹಗರಣ ಜಿಲ್ಲೆಗೂ ವ್ಯಾಪಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

- Advertisement -

ಇದರಲ್ಲಿ ಜಿಲ್ಲೆಯ ಹಲವು ಪ್ರಭಾವಿಗಳು ಭಾಗಿಯಾಗಿರುವ ಗುಸು ಗುಸು ಕೇಳಿ ಬರುತ್ತಿದ್ದು, ಜಿಲ್ಲೆಯಲ್ಲಿ ಮದ್ಯ, ಹೋಟೆಲ್ ಮತ್ತು ದ್ವಿಚಕ್ರ  ವಾಹನಗಳ ಉದ್ಯಮ ನಡೆಸುತ್ತಿರುವ ಕುಟುಂಬದ ಸದಸ್ಯ ಸೇರಿದಂತೆ ಕೆಲ ಪ್ರಭಾವಿ ಅಕ್ರಮಕ್ಕೆ ಕೈ ಜೋಡಿಸಿವೆ ಎಂಬ ಮಾತುಗಳು  ಹರಿದಾಡುತ್ತಿವೆ.

ಈಗಾಗಲೇ ಚನ್ನರಾಯಪಟ್ಟಣ ತಾಲೂಕಿನ ಮೂವರು ಅಭ್ಯರ್ಥಿಗಳು, ಇದಕ್ಕೆ ಸಹಕಾರ ನೀಡಿದ ಅವರ ಪೋಷಕರು ಹಾಗೂ ಕುಮ್ಮಕ್ಕು ನೀಡಿದ ಮೂರನ್ನೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿರುವ ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ. ಇದನ್ನು ಆಧರಿಸಿ ಇನ್ನೂ ಹಲವು ಅಭ್ಯರ್ಥಿಗಳು ಮತ್ತು ಅವರಿಗೆ ಸಹಕಾರ ನೀಡಿದವರ ಪತ್ತೆಗೆ ತನಿಖಾ ತಂಡ ಬಲೆ ಬೀಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ನಗರದ ಹಲವು ಪ್ರಭಾವಿಗಳೂ ಕೈ ಜೋಡಿಸಿರುವುದು ಖಾತ್ರಿಯಾದರೆ ಶೀಘ್ರವೇ ಸಿಐಡಿ ತಂಡ ನಗರಕ್ಕೂ ಎಂಟ್ರಿಕೊಡುವ ಸಾಧ್ಯತೆ ಇದೆ.  

ಶಶಿಧರ್ ವಿಚಾರಣೆ:

ಈ ನಡುವೆ ಇದೇ ಹಗರಣದಲ್ಲಿ ಚನ್ನರಾಯಪಟ್ಟಣ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಜೆಡಿಎಸ್‌ನಿಂದ ಗೆದ್ದಿರುವ ಸದಸ್ಯ ಶಶಿಧರ್ ಅವರ ಹೆಸರೂ ತಳುಕು ಹಾಕಿಕೊಂಡಿದ್ದು, ಭಾನುವಾರವೇ ಅವರನ್ನು ವಶಕ್ಕೆ ಪಡೆದಿರುವ ಸಿಐಡಿ ತಂಡ, ಎರಡು ದಿನಗಳಿಂದಲೂ ಬೆಂಗಳೂರಿನಲ್ಲಿ ವಿಚಾರಣೆಗೆ ಒಳಪಡಿಸಿದೆ. ಆದರೆ ಹಗರಣದಲ್ಲಿ ಇವರ ಪಾತ್ರ ಏನೆಂಬುದು ತನಿಖೆ ನಂತರವಷ್ಟೇ ಬಯಲಾಗಬೇಕಿದೆ.

ಯಾರೇ ಮಾಡಿದರೂ ತಪ್ಪೆ:

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ದಿನಕ್ಕೆ 18  ಗಂಟೆ ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದಾರೆ. ಪ್ರಾಮಾಣಿಕವಾಗಿ ಎಕ್ಸಾಂ ಬರೆದಿರುವವರಿಗೆ ಅನ್ಯಾಯವಾಗಿರುವುದು ಸಿಐಡಿ ತನಿಖೆಯಿಂದ ಹೊರ ಬಂದಿದೆ. ಹಗರಣದ ಬಗ್ಗೆ ಆಳವಾಗಿ ತನಿಖೆ ನಡೆಸುತ್ತಿರುವುದನ್ನು ಸ್ವಾಗತಿಸುತ್ತೇನೆ ಎಂದರು.

ಸ್ಥಳೀಯ ಜೆಡಿಎಸ್ ಮುಖಂಡರೂ ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಹಗರಣ ವಿಚಾರದಲ್ಲಿ ಪಕ್ಷ ಎನ್ನುವುದು ಎರಡನೇ ವಿಚಾರ. ಯಾವುದೇ ಪಕ್ಷ ಇಂತಹ ಕೆಲಸ ಮಾಡಿ ಎಂದು ಯಾರಿಗೂ ಹೇಳಿಲ್ಲ, ಜನಪ್ರತಿನಿಧಿಗಳಾಗಿ ಒಳ್ಳೆಯ ಕೆಲಸ ಮಾಡಿ ಎಂದೇ ಎಲ್ಲರೂ ಹೇಳುವುದು. ಇದು ಅವರು ಮಾಡಿರುವ ವೈಯುಕ್ತಿಕ ತಪ್ಪು. ಯಾರು ಮಾಡಿದರೂ ತಪ್ಪು ತಪ್ಪೇ ಎಂದ ಅವರು,   ಇದರ ಹಿಂದೆ ಇರುವವರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.

ಲಕ್ಷ ಲಕ್ಷ ಹಣವನ್ನು ಯಾರು, ಯಾರಿಗೆ ನೀಡಿದರು. ಎಲ್ಲಿ ಕೊಟ್ಟರು ಎಂಬುದೂ ಬಯಲಾಗಬೇಕು. ಹಣದಿಂದಲೇ ವಾಮಮಾರ್ಗದಿಂದ ಆಯ್ಕೆಯಾಗಬೇಕು ಎಂದು ಪ್ರಯತ್ನ ಮಾಡಿರುವುದು ದೊಡ್ಡ ಮೋಸ ಎಂದರು.

 ಏನೋ ಮಾಡಲು ಹೋಗಿ ಯಡವಟ್ಟು:

ಮೂಲಗಳ ಪ್ರಕಾರ ಸಿಐಡಿ ವಿಚಾರಣೆ ಎದುರಿಸುತ್ತಿರುವ ಶಶಿಧರ್ ಅವರ ಪಾತ್ರ ಪಿಎಸ್ ಐ ಅಕ್ರಮದಲ್ಲಿ ಏನೂ ಇಲ್ಲ ಎಂದು ಹೇಳಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಪ್ರಭಾವಿಯಾಗಿ ತಮ್ಮದೇ ಛಾಪು ಮೂಡಿಸಿಕೊಂಡಿರುವವರ ಬಳಿ, ಜನರು ಒಂದಲ್ಲ, ಒಂದು ರೀತಿಯ ಸಹಾಯ ಕೇಳಿಕೊಂಡು ಬರುತ್ತಾರೆ. ನೀವು ಇಂಥವರಿಗೆ ಹೇಳಿದರೆ ಅನುಕೂಲವಾಗಲಿದೆ ಎಂದು ಒತ್ತಡ ಹೇರಿ, ದುಂಬಾಲು ಬಿದ್ದಿರುತ್ತಾರೆ. ಅವರ ನೆರವಿಗೆ ನಿಂತರೆ ಕಾನೂನು ತೊಡಕು ಸೇರಿದಂತೆ ಬೇರೆ ಸಮಸ್ಯೆಯಾಗಲಿದೆ ಎಂಬ ಅರಿವಿನ ಕೊರತೆಯಿಂದ ಸಹಾಯ ಮಾಡಿರಬಹುದು ಅಷ್ಟೆ. ಕಾನೂನು ತಿಳುವಳಿಕೆ ಇಲ್ಲದೆ ಶಶಿಧರ್ ಮಾಡಿರುವ ಯಡವಟ್ಟಿನಿಂದ ಈಗ ಪ್ರಾಯಶ್ಚಿತ್ತ ಪಡುವಂತಾಗಿದೆ. ಸಮಾಜ ಸೇವೆ, ಬಡವರಿಗೆ ಸಹಾಯ ಮಾಡಲು ಹೋದವರು ಒಮ್ಮೊಮ್ಮೆ ಇಕ್ಕಟ್ಟಿಗೆ ಸಿಲುಕುತ್ತಾರೆ ಎಂಬುದಕ್ಕೆ ಶಶಿಧರ್ ಅವರೇ ಉದಾಹರಣೆ. ಇದರಿಂದ ಕುಟುಂಬ ಸದಸ್ಯರೂ ಮಜುಗರ ಅನುಭವಿಸಬೇಕಾಗುತ್ತದೆ. ಅವರು ಕಳಂಕ ರಹಿತರಾಗಿ ಶೀಘ್ರ ಹೊರ ಬರುತ್ತಾರೆ ಎಂಬುದು ಅವರ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



Join Whatsapp