►ಮಂಗಳೂರಿನಲ್ಲಿ ಪಾಕಿಸ್ತಾನದ ಏಜೆಂಟ್‌ಗಳು ಹುಟ್ಟಿಕೊಳ್ಳುತ್ತಾರೆ ಎಂಬ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆಗೆ ಕಿಡಿ
ಮಂಗಳೂರು: ಜಿಲ್ಲೆಯನ್ನು ಪಾಕಿಸ್ತಾನಕ್ಕೆ ಹೋಲಿಸಿ ಸಂಬಂಧ ಕಲ್ಪಿಸಿ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ನೀಡಿದ ಹೇಳಿಕೆ ಖಂಡನೀಯ. ದೇಶದ ಭಾಗವೊಂದರ ಜನರನ್ನು ಪಾಕಿಸ್ತಾನದ ಭಯೋತ್ಪಾದಕರಾಗಿ ಚಿತ್ರೀಕರಿಸಿದ ಕೇಂದ್ರ ಸಚಿವರ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದ್ದಾರೆ.
ಬುದ್ಧಿವಂತರ ಜಿಲ್ಲೆ ಎಂದೇ ದೇಶದಲ್ಲಿ ಖ್ಯಾತಿ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯು ಶಾಂತಿ ಸೌಹಾರ್ದತೆಗೂ ಹೆಸರುವಾಸಿಯಾಗಿದೆ. ನಂತರದ ದಿನಗಳಲ್ಲಿ ಸಂಘಪರಿವಾರ ಮತ್ತು ಬಿಜೆಪಿಯವರು ಇಲ್ಲಿನ ಜನರಲ್ಲಿ ಕೋಮು ವಿಷಬೀಜ ಬಿತ್ತಿ ಸಂಘಪರಿವಾರದ ಕೋಮು ಪ್ರಯೋಗಶಾಲೆಯನ್ನಾಗಿಸಿದರು. ಗೋವಾ ಬಾಂಬ್ ಸ್ಫೋಟದ ರೂವಾರಿ ಸಂಘಪರಿವಾರದ ಕಾರ್ಯಕರ್ತನಾದ ಕಡಬ ಮೂಲದ ಜಯಪ್ರಕಾಶ್, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯ ಸಂಚುಗಾರರು ಮತ್ತು ಕ್ರಿಮಿನಲ್ ಗಳನ್ನು ಸಂಘಪರಿವಾರ ಹುಟ್ಟುಹಾಕಿರುವುದು ಜಿಲ್ಲೆಗೆ ಕಪ್ಪುಚುಕ್ಕೆಯನ್ನು ತಂದಿದೆ. ಇಂತಹ ಸಂಘಟನೆಗಳನ್ನು ಹತ್ತಿಕ್ಕುವ ಬದಲು ಮುಸ್ಲಿಮರ ವಿರುದ್ಧವಾಗಿ ರಾಜಕೀಯ ಪ್ರೇರಿತ ಹೇಳಿಕೆ ಕೊಡುವುದರ ಹಿಂದೆ ಮುಸ್ಲಿಮ್ ದ್ವೇಷವೇ ಹೊರತು ಜಿಲ್ಲೆಯ ಬಗೆಗಿನ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.
ದೇಶದ ಅವಿಭಾಜ್ಯ ಪ್ರದೇಶವೊಂದರ ಜನರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸುವುದು ಕೇಂದ್ರ ಸಚಿವರಿಗೆ ಭೂಷಣವಲ್ಲ. ಇಂತಹ ಹೇಳಿಕೆಗಳನ್ನು ನೀಡುವ ಬದಲು ಅಭಿವೃದ್ಧಿಯ ಕಡೆಗೆ ಗಮನಹರಿಸಿ, ದಿನಬಳಕೆಯ ಸಾಮಗ್ರಿಗಳು ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಬಗ್ಗೆ ಸರ್ಕಾರ ಯೋಜನೆ ರೂಪಿಸಬೇಕು. ಅದರ ಹೊರತಾಗಿ ನೀಚ ರಾಜಕೀಯಕ್ಕಾಗಿ ಧರ್ಮಾಧಾರಿತವಾಗಿ ಹೇಳಿಕೆ ನೀಡಿ ಜನರನ್ನು ಕೆರಳಿಸುವುದನ್ನು ಕೈ ಬಿಡಬೇಕೆಂದು ಅಬೂಬಕರ್ ಕುಳಾಯಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.