ಮಡಿಕೇರಿ: ಈದುಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕನೋರ್ವ ನೀರು ಪಾಲಾದ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ.
ನಾಸಿರ್ ಪಾಷ ಹಾಗೂ ಪಝೀಯಾ ಭಾನು ಅವರ ಪುತ್ರ ಫರ್ಹಾನ್ (12) ಮೃತಪಟ್ಟ ಬಾಲಕ. 7ನೇ ತರಗತಿಯಲ್ಲಿ ಕಲಿಯುತ್ತಿದ್ದ ಫರ್ಹಾನ್, ರಂಝಾನ್ ಹಬ್ಬದ ಹಿನ್ನೆಲೆಯಲ್ಲಿ ಬೈಲ್ ಕೊಪ್ಪದಿಂದ ಶನಿವಾರಸಂತೆಯಲ್ಲಿರುವ ಅಜ್ಜ – ಅಜ್ಜಿಯ ಮನೆಗೆ ಬಂದಿದ್ದ.
ಶನಿವಾರಸಂತೆಯಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದ ಮಾವನ ಅಂಗಡಿಯಲ್ಲಿ ಸಂಜೆಯವರೆಗೆ ಇದ್ದ ಪರ್ಹಾನ್, ಸಂಜೆ 5 ಗಂಟೆ ಸುಮಾರಿಗೆ ಮಾವನ ಮಗನೊಂದಿಗೆ ಶನಿವಾರಸಂತೆಯ ಹೆಮ್ಮನೆಯಲ್ಲಿರುವ ಹೊಳೆಯಲ್ಲಿ ಈಜಲು ತೆರಳಿದ್ದಾನೆ.
ಹೊಳೆಯ ಬದಿಯ ಕಲ್ಲಿನಲ್ಲಿ ಪಾಚಿ ಕಟ್ಟಿದ್ದರಿಂದ ಕಾಲು ಜಾರಿ ಫರ್ಹಾನ್ ನೀರಿಗೆ ಬಿದ್ದಿದ್ದಾನೆ. ಎಷ್ಟೇ ಹೊತ್ತಾದರೂ ನೀರಿನಿಂದ ಮೇಲೆ ಬಾರದ ಹಿನ್ನೆಲೆಯಲ್ಲಿ ಮಾವನ ಮಗ ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ. ರಾತ್ರಿ ಪೂರ್ತಿ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.