ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು ಇದೇ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ತಿರುಗೇಟು ನೀಡುತ್ತಿದೆ.
ಶನಿವಾರ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಟ್ವೀಟ್ ಮಾಡಿದ್ದು ಈ ಮೂಲಕ ಚರ್ಚೆಯ ಬಿಸಿ ಹೆಚ್ಚಿಸಿದ್ದಾರೆ. ವಿಧಾನಸೌಧವನ್ನು ‘ವ್ಯಾಪಾರ ಸೌಧ’ ಮಾಡಿದ್ದೇ ಬಿಜೆಪಿಯ ಸಾಧನೆ ಎಂದು ಮಾಜಿ ಸಚಿವರು ಟೀಕಿಸಿದ್ದು ಅತ್ತ ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಖರ್ಗೆ ತನ್ನ ಟ್ವೀಟಿನಲ್ಲಿ ಸಿಎಂ ಹುದ್ದೆಗೆ – 2500 ಕೋಟಿ, PSI ಹುದ್ದೆಗೆ – 80 ಲಕ್ಷ, ಮಂತ್ರಿಗಿರಿಗೆ – 50-70 ಕೋಟಿ,ಕಾಮಗಾರಿಗಳಿಗೆ -ಶೇ 40 , ಮಠಗಳಿಗೆ – ಶೇ 30, ವರ್ಗಾವಣೆ – FIXED RATE ಹೀಗೆ ಬರೆದಿದ್ದು ಮತ್ತೇ ಬಿಜೆಪಿ ಪಾಳಯಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.