ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಜೀವಿಶಾಸ್ತ್ರ ವ್ಯವಸ್ಥೆಯ ಮೇಲೆ ಉಂಟಾಗಿರುವ ದುಷ್ಟಪರಿಣಾಮಗಳನ್ನು ಸರಿದೂಗಿಸಲು ಐಐಎಸ್ಸಿ ಸಂಸ್ಥೆಯ ತಜ್ಞರ ನೆರವಿನೊಂದಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
2022-23 ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದಾರೆ.
ಸಭೆಯ ಮುಖ್ಯಾಂಶಗಳು:
1. ಕ್ರಿಯಾಯೋಜನೆ ಸಿದ್ದಪಡಿಸಿ ಜಿಲ್ಲೆಗಳಿಗೆ ಕಾಲಮಿತಿ ನಿಗದಿಪಡಿಸಿ ಅನುಷ್ಠಾನದ ರೂಪುರೇಷೆಗಳನ್ನು ಸಿದ್ಧಪಡಿಸುವುದು.
2. ವಿಶ್ವ ಬ್ಯಾಂಕ್ ನೆರವಿನ ಪ್ಲಾಸ್ಟಿಕ್ ನಿರ್ವಹಣೆ ಯೋಜನೆಗೆ ದೊಡ್ಡ ಮೊತ್ತದ ಅನುದಾನ ನಿಗದಿಪಡಿಸಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕೆ ನಿರ್ದಿಷ್ಟ ಯೋಜನೆಯನ್ನು ರೂಪಿಸಬೇಕು. ವ್ಯಾಪಕ ಪ್ರಚಾರ ನೀಡಬೇಕು. ಸಾರ್ವಜನಿಕರನ್ನು ತೊಡಗಿಸಿಕೊಳ್ಳಬೇಕು. ಫಲಿತಾಂಶವನ್ನು ಜನರಿಗೆ ತಿಳಿಸುವಂತೆ ಸೂಚಿಸಿದರು.
3. ಶ್ರೀಗಂಧ ನೀತಿ ದುರ್ಬಳಕೆಯಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.
4.ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶಗಳಿಗೆ 5.00 ಕೋಟಿ ರೂ.ಗಳ ವಿಶೇಷ ಅನುದಾನ ಒದಗಿಸಲಾಗಿದೆ. ಕಾಡಿನ ಹೊರಗಿರುವ ಪ್ರಾಣಿಗಳ ಸಂರಕ್ಷಣೆಯನ್ನು ಕೈಗೊಳ್ಳುವುದು.
5. ಮಾನವ- ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
6. ಮರಗಳ ಕಡಿತಲೆ ಮತ್ತು ಸಾಗಾಣಿಕೆ ಸರಳೀಕರಣ ಯೋಜನೆಯಡಿ ಖಾಸಗಿ ಭೂಮಿಗಳಲ್ಲಿ ರೈತರು ಬೆಳೆದಿರುವ ಮರಗಳನ್ನು ಕಡಿಯುವ ಮತ್ತು ಸಾಗಣಿಕೆ ಮಾಡಲು ಅನುಮತಿ ಪ್ರಕ್ರಿಯೆ ಸರಳೀಕರಣ ಮಾಡುವುದು- ದುರ್ಬಳಕೆಯಾಗದಂತೆ ಕ್ರಮ ವಹಿಸುವುದು. ಹಳಿಯಾಳ, ದಾಂಡೇಲಿಗಳಲ್ಲಿನ ಟಿಂಬರ್ ಮಾರುಕಟ್ಟೆ ಮೇಲೆ ನಿಯಂತ್ರಿಸಬೇಕು.
7. ಆಡಳಿತದಲ್ಲಿ ಸುಧಾರಣೆ: ಮಾಲಿನ್ಯ ನಿಯಂತ್ರಣಾ ಮಂಡಳಿಯಲ್ಲಿ ಅರ್ಜಿಗಳ ಸರಳೀಕರಣ ಮಾಡುವುದು. ಮಾಲಿನ್ಯಗಳ ವರ್ಗೀಕರಣವನ್ನು ಮಂಡಳಿ ತೀರ್ಮಾನಿಸಲಿ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಕ್ಷಿಷ್ಟವಿರುವ ಕೆಲವು ನಿಯಮಗಳನ್ನು ತೆಗೆದುಹಾಕಬೇಕು. ವ್ಯವಸ್ಥೆಯನ್ನು ಆದಷ್ಟು ಸರಳೀಕರಿಸಬೇಕು ಎಂದು ಸೂಚಿಸಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೊಂದರೆಯಾಗಬಾರದು. ಸಮ್ಮತಿಗಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಅನುಮತಿ ನೀಡುವ ಮುನ್ನ ಕಡ್ಡಾಯವಾಗಿ ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸುವುದು.
8. ಬೆಳಗಾವಿ ಹಿಡ್ಕಲ್ ಅಣೆಕಟ್ಟು ಪ್ರದೇಶದಲ್ಲಿ ಪಕ್ಷಿಧಾಮ ಮತ್ತು ಚಿಟ್ಟೆಗಳ ಉದ್ಯಾನವನ್ನು ಪ್ರವಾಸೋದ್ಯಮ ದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಪಡಿಸುವುದು.
ಸಭೆಯಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಕೆ.ಸಿಂಗ್, ವಿಜಯ್ ಕುಮಾರ್ ಗೋಗಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.