PSI ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಜೊತೆ ನಂಟು: ಗೃಹ ಸಚಿವರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ

Prasthutha|

ಬೆಂಗಳೂರು: PSI ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರೊಂದಿಗೆ ನಂಟಿದ್ದರೂ ಲಜ್ಜೆಗೆಟ್ಟು ಕುರ್ಚಿಗೆ ಅಂಟಿಕೊಂಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಈ ಕೂಡಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಪುಟದಿಂದ ವಜಾಗೊಳಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸರ್ಕಾರ, ಸಚಿವರು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾತ್ರವಿಲ್ಲದೆ ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಸಿಐಡಿ ತನಿಖೆಯಿಂದ ನ್ಯಾಯ ಸಿಗುವ ನಂಬಿಕೆ ನಮಗಿಲ್ಲ. ಕರ್ನಾಟಕ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ 5ನೇ ರ್ಯಾಂಕ್ ಪಡೆದ ದರ್ಶನ್ ಗೌಡ ಹಾಗೂ 10ನೇ ರ್ಯಾಂಕ್ ಪಡೆದ ನಾಗೇಶ್ ಗೌಡ ಎಂಬುವವರು ಸಚಿವ ಅಶ್ವಥ್ ನಾರಾಯಣ ಅವರ ಸಂಬಂಧಿಕರು. ಮೇಲ್ನೋಟಕ್ಕೆ ಈ ಹಗರಣದಲ್ಲಿ ಅಶ್ವಥ್ ನಾರಾಯಣ ಅವರ ಪಾತ್ರವೂ ಕಂಡುಬರುತ್ತಿದ್ದು, ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಪಿಎಸ್‌ಐ ನೇಮಕಾತಿ ಸಮಿತಿಯ ನೇತೃತ್ವ ವಹಿಸಿದ್ದ ಎಡಿಜಿಪಿ ಅಮೃತ್ ಪೌಲ್ ಹಾಗೂ ಡಿವೈಎಸ್‌ಪಿ ಶಾಂತ ಕುಮಾರ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಅಕ್ರಮ ನೇಮಕಾತಿಯಲ್ಲಿ ಈ ಇಬ್ಬರ ಪಾತ್ರವೂ ಇದೆ ಎಂದರ್ಥ. ತಕ್ಷಣ ಇವರ ವಿರುದ್ಧ ಕೇಸ್ ದಾಖಲಿಸಿ, ಸೇವೆಯಿಂದ ಅಮಾನತು ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಕಲಬುರಗಿಯ ಜ್ಞಾನಜ್ಯೋತಿ ಸಂಸ್ಥೆ ಪಿಎಸ್‌ಐ ಪರೀಕ್ಷೆ ನಡೆಸಲು ಯೋಗ್ಯವಾದ ಪರೀಕ್ಷಾ ಕೇಂದ್ರವಾಗಿರಲಿಲ್ಲ ಎಂಬ ವರದಿ ಇದ್ದರೂ ಸ್ಥಳೀಯ ಪೊಲೀಸರು ಅದನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿದ್ದಾರೆ. ಅಂದರೆ ಹಗರಣದಲ್ಲಿ ಶಾಮೀಲಾದ ಇನ್ನಷ್ಟು ಅಧಿಕಾರಿಗಳ ಹೆಸರು ಬಯಲಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

40% ಕಮಿಷನ್, ಅಕ್ರಮ ನೇಮಕಾತಿ, ಕೋಟ್ಯಂತರ ರೂಪಾಯಿ ಅವ್ಯವಹಾರ ಹೀಗೆ ಅಡಿಯಿಂದ ಮುಡಿವರೆಗೆ ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿರುವ ಜನಪೀಡಕ ಬಿಜೆಪಿ ಸರ್ಕಾರದ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿವೆ ಅವರು ಹೇಳಿದ್ದಾರೆ.

ಭ್ರಷ್ಟಾಚಾರವೇ ನಾಚುವಂತೆ ಸಿಕ್ಕ ಎಲ್ಲ ಅವಕಾಶದಲ್ಲೂ ಗರಿಷ್ಠ ಲೂಟಿ ಹೊಡೆಯುತ್ತಿರುವ ರಾಜ್ಯದ ಬಿಜೆಪಿ ಸರ್ಕಾರವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಯಾವ ರೀತಿ ಯಶಸ್ವಿ ಸರ್ಕಾರವಾಗಿ ಕಂಡಿತೋ? ದೇಶದಲ್ಲೇ ಅತಿ ಹೆಚ್ಚು ಅಂದರೆ 40% ಕಮಿಷನ್ ನಿಗದಿ ಮಾಡಿರುವುದೇ ಅಮಿತ್ ಶಾ ಅವರ ಪ್ರಕಾರ ಸಾಧನೆ ಇರಬಹುದೇ? ಎಂದು ಅವರು ಕುಟುಕಿದ್ದಾರೆ.



Join Whatsapp