ಬೆಂಗಳೂರಿನಲ್ಲಿ ಮಳೆಗೆ 238 ವಿದ್ಯುತ್ ಕಂಬ, 300 ಮರ ಧರಾಶಾಹಿ

Prasthutha|

ಬೆಂಗಳೂರು: ಭಾನುವಾರ ಸುರಿದ ಧಾರಾಕಾರ ಗಾಳಿ-ಮಳೆಯಿಂದಾಗಿ ಬೆಂಗಳೂರು ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಪುನರ್ ಸ್ಥಾಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

- Advertisement -

ಭಾರೀ ಗಾಳಿ ಮಳೆಗೆ ಸುಮಾರು 238 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಸುಮಾರು 300 ಮರಗಳು ಹಾಗು ಅದರ ಕೊಂಬೆಗಳು ವಿದ್ಯುತ್ ಕಂಬಗಳ ಮೇಲರಗಿವೆ. ಇದರಿಂದಾಗಿ ಬೆಸ್ಕಾಂ ವ್ಯಾಪ್ತಿಯ ಹೆಚ್ಚಿನ ವಿಭಾಗ ಗಳಲ್ಲಿ ಹಲವು ತಾಸು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮುರಿದ ಕಂಬಗಳ ದುರಸ್ತಿ ಕಾರ್ಯ ಮುಗಿದಿದ್ದು, ಹಲವೆಡೆ ವಿದ್ಯುತ್ ಮರುಜೋಡಣೆ ಆಗಿದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಮನಗರ, ಚಂದಾಪುರ, ಕನಕಪುರ ಹಾಗು ಮಾಗಡಿ ವಿಭಾಗ ಗಳಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು ಮುರಿದ ಕಂಬಗಳ ತೆರವು ಕಾರ್ಯ ಭರದಿಂದ ಸಾಗಿದೆ. ಬೆಂಗಳೂರು ನಗರದ ಕೆಲವು ಬಡಾವಣೆಗಳಲ್ಲಿ ನಿನ್ನೆ ರಾತ್ರಿಯೇ  ವಿದ್ಯುತ್ ಮರು ಸ್ಥಾಪನೆ ಕಾರ್ಯ  ಮುಗಿದಿದ್ದು, ಉಳಿದ ಪ್ರದೇಶಗಳಲ್ಲಿ ಸೋಮವಾರ 5 ಗಂಟೆ ಒಳಗೆ ಮುರಿದಿರುವ ಎಲ್ಲ ವಿದ್ಯುತ್ ಕಂಬಗಳನ್ನು ಬದಲಿಸಲಾಗುವುದು ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಮುರಿದಿರುವ ವಿದ್ಯುತ್ ಕಂಬಗಳಲ್ಲಿ ಸುಮಾರು 40 ಶೇ. ಕಂಬಗಳನ್ನು ಬದಲಿಸಲಾಗಿದೆ. ಸಂಜೆ ಒಳಗೆ ಎಲ್ಲ 238 ಕಂಬಗಳ ಮರು ಸ್ಥಾಪನೆ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು ದಕ್ಷಿಣ ವಿಭಾಗ ದಲ್ಲಿ 21 ಕಂಬಗಳು ಮುರಿದಿದ್ದು, 7 ಕಂಬಗಳ ಮರು ಸ್ಥಾಪನೆ  ಆಗಿದೆ, ಉಳಿದ 14 ಕಂಬಗಳ ಮರು ಸ್ಥಾಪನೆ ಕಾರ್ಯ ನಡೆಯುತ್ತಿದೆ. ಪೂರ್ವ ವಿಭಾಗದಲ್ಲಿ ಹಾನಿಗೊಳಗಾದ ಎಲ್ಲ 13 ಕಂಬಗಳ ಮರು ಸ್ಥಾಪನೆ ಆಗಿದ್ದು ವಿದ್ಯುತ್ ಪೂರೈಕೆ ನೀಡಲಾಗಿದೆ. ಅದೇ ರೀತಿ ಪಶ್ಚಿಮ ವಿಭಾಗದಲ್ಲಿ 7 ಕಂಬಗಳು ಮುರಿದಿದ್ದು 2 ಕಂಬಗಳ ಜೋಡಣೆ ಕಾರ್ಯ ಮುಗಿದಿದೆÀ, ಇನ್ನುಳಿದ ಕಂಬಗಳನ್ನು ಸಂಜೆ ಒಳಗೆ ಜೋಡಿಸಲಾಗುವುದು.

ರಾಮನಗರದ ವಿಭಾಗದಲ್ಲಿ 100 ಹಾಗು ಕೋಲಾರ ವಿಭಾಗದಲ್ಲಿ 70 ಕಂಬಗಳು ಹಾನಿಗೊಳಗಾಗಿದ್ದು, ಪುನರ್ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ, ಸಂಜೆ ಒಳಗೆ ಎಲ್ಲ ಕಂಬಗಳ ದುರಸ್ಥಿ ಕಾರ್ಯ ಮುಗಿಯಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ತುತ್ ಮುರು ಜೋಡಣೆ ಕಾರ್ಯದಲ್ಲಿ ಬೆಸ್ಕಾಂನ ಒಟ್ಟು 855 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾನುವಾರ ರಾತ್ರಿ 228 ಸಿಬ್ಬಂದಿ ಮತ್ತು ಸೋಮವಾರ 627 ಸಿಬ್ಬಂದಿ ವಿದ್ಯುತ್ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ.



Join Whatsapp