ಬೆಂಗಳೂರು: ವ್ಯಾಪಕ ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್ ಸಿ ಕಚೇರಿಗೆ ಬೀಗ ಜಡಿದು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, “ಭ್ರಷ್ಟಾಚಾರದ ತಾಣ ಎಂಬ ಕುಖ್ಯಾತಿಗೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು ಸರಿದಾರಿಗೆ ತರುವ ಕುರಿತು ಎಲ್ಲ ಸರ್ಕಾರಗಳು ಮಾತನಾಡಿವೆ. ಆದರೆ ಇದಕ್ಕೆ ಕಾಯಕಲ್ಪ ಮಾತ್ರ ಇನ್ನೂ ಆಗಿಲ್ಲ. ಶ್ಯಾಮ್ ಭಟ್ ರಂತಹ ಪರಮ ಭ್ರಷ್ಟಾಚಾರಿಗಳನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇ ದೊಡ್ಡ ದುರಂತ. ಇದನ್ನು ಖಂಡಿಸಿ ರಾಜಭವನದ ಮುಂದೆ ಪ್ರತಿಭಟನೆ ಮಾಡಿದ ನಮ್ಮ ಕಾರ್ಯಕರ್ತರು ಈಗಲೂ ಮೊಕದ್ದಮೆ ಎದುರಿಸುತ್ತಿದ್ದಾರೆ. ಕೆಪಿಎಸ್ ಸಿ ಅಕ್ರಮಗಳನ್ನು ಖಂಡಿಸಿ ಮೇ 4ರ ಬುಧವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಕೆಪಿಎಸ್ಸಿ ಕಚೇರಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಹೇಳಿದರು.
“1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳ ನೇಮಕದಲ್ಲಿ ಅನರ್ಹರಿಗೆ ಹುದ್ದೆ ನೀಡಿರುವುದನ್ನು ಕರ್ನಾಟಕ ಲೋಕಸೇವಾ ಆಯೋಗ ಒಪ್ಪಿಕೊಂಡಿದ್ದು, 28 ಗೆಜೆಟೆಡ್ ಅಧಿಕಾರಿಗಳನ್ನು ಕೈಬಿಟ್ಟು ಉಳಿದವರನ್ನು ನೇಮಿಸಲಾಯಿತು. 1998, 1999, 2004ರಲ್ಲಿ ಕೆಪಿಎಸ್ಸಿ ನಡೆಸಿದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೆ.ಆರ್. ಖಲೀಲ್ ಅಹ್ಮದ್ ಮತ್ತು ಇತರ ಅಭ್ಯರ್ಥಿಗಳು ಹೈಕೋರ್ಟ್ಗೆ 2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 2016ರ ಜೂನ್ 21ರಂದು ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್ 2018 ರಲ್ಲಿ ಎತ್ತಿ ಹಿಡಿದಿದೆ” ಎಂದು ಮೋಹನ್ ದಾಸರಿ ತಿಳಿಸಿದರು.
“ಅಕ್ರಮಗಳನ್ನೇ ಹೊದ್ದು ಮಲಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಹಿಂದೆಲ್ಲಾ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಭ್ರಷ್ಟಾಚಾರವಾದರೆ 2015ರಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ಸಿದ್ಧತೆ ನಡೆಯುತ್ತಿರುವ ಹಂತದಲ್ಲಿಯೇ ಅಕ್ರಮವಾಗಿದೆ. 129 ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಗುರುತಿನ ಚಿಹ್ನೆ ಹಾಕುವ ಮೂಲಕ ಅಕ್ರಮ ನಡೆಸಿದ್ದರು. ಇಷ್ಟೇ ಅಲ್ಲದೆ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರೀ ಅಕ್ರಮ ನಡೆದಿದೆ. ಜೊತೆಗೆ ಕೆಪಿಎಸ್ಸಿ ಅವರೇ ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿ ಮೌಲ್ಯಮಾಪನವಾದ ನಂತರ ಅಂಕಗಳನ್ನು ತಿದ್ದಿದ ಆರೋಪವಿದೆ” ಎಂದು ಮೋಹನ್ ದಾಸರಿ ಮಾಹಿತಿ ನೀಡಿದರು.
“2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 106 ಹುದ್ದೆಗಳ ನೇಮಕಾತಿಯಲ್ಲಿ, ಅಂಗವಿಕಲರೆಂದು ಸುಳ್ಳು ಪ್ರಮಾಣಪತ್ರ ನೀಡಿ 20 ಮಂದಿ ಪರೀಕ್ಷೆ ಬರೆದಿದ್ದರು. ಇನ್ನು 64 ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಹೆಸರು, ವಿಳಾಸ ಬರೆದು ಉತ್ತೀರ್ಣರಾಗಿದ್ದರು. ನಂತರ ಇವರನ್ನೆಲ್ಲ ಅನರ್ಹ ಮಾಡಲಾಯಿತು. 1999, 2004 ಮತ್ತು 2008ರ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳಿದ್ದು, ಇವು ಕೋರ್ಟ್ ಅಂಗಳದಲ್ಲಿವೆ” ಎಂದು ಮೋಹನ್ ದಾಸರಿ ತಿಳಿಸಿದರು.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡುತ್ತಾ 2011ನೇ ಸಾಲಿನ ಕೆಎಎಸ್ ನೇಮಕ ಸಂಬಂಧ ಕೆಪಿಎಸ್ಸಿ 2014ರ ಮಾರ್ಚ್ 21ರಂದು 162 ಗ್ರೂಪ್ ಎ ಮತ್ತು 200 ಗ್ರೂಪ್ ಬಿ ಹುದ್ದೆಗಳ ನೇಮಕದ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಡಾ.ಎಚ್.ಪಿ.ಎಸ್.ಮೈತ್ರಿರವರು ನೇಮಕದಲ್ಲಿ ಅಕ್ರಮ ನಡೆದಿವೆ, ಆಯೋಗದ ಸದಸ್ಯರೇ ಹಣದ ಬೇಡಿಕೆ ಇಟ್ಟಿದ್ದರೆಂದು ದೂರು ನೀಡಿದ್ದರು. ತನಿಖೆ ನಡೆಸಿದ್ದ ಸಿಐಡಿ, ಮೇಲ್ನೋಟಕ್ಕೆ ಅಕ್ರಮ ಸಾಬೀತಾಗಿದೆಯೆಂದು ಹೇಳಿ, ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಮತ್ತಿತರ ಅಧಿಕಾರಿಗಳು ಅಕ್ರಮವೆಸಗಿದ್ದಾರೆಂದು ಖಚಿತಪಡಿಸಿ 10 ಸಾವಿರ ಪುಟಗಳ ವರದಿ ನೀಡಿತ್ತು. ಡಿಪಿಎಆರ್ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿತ್ತು. ‘ಕ್ಯಾಷ್ ಫಾರ್ ಜಾಬ್ಸ್’ ಎಂದೇ ಹೆಸರಾಗಿದ್ದ ಹಗರಣದಿಂದಾಗಿ, ನೇಮಕ ಪ್ರಕ್ರಿಯೆ ರದ್ದುಗೊಳಿಸಬೇಕೆಂಬ ಒತ್ತಡ ಹಿನ್ನೆಲೆಯಲ್ಲಿ ಸರಕಾರ 2014ರ ಆಗಸ್ಟ್ 14ರಂದು 2011ನೇ ಸಾಲಿನ ಕೆಎಎಸ್ ನೇಮಕ ಸಂಬಂಧ ಹೊರಡಿಸಿದ್ದ ಎಲ್ಲ ಅಧಿಸೂಚನೆ ರದ್ದುಗೊಳಿಸಿತ್ತು. ಆನಂತರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸಂಪೂರ್ಣ ನೇಮಕ ಪ್ರಕ್ರಿಯೆ ರದ್ದುಗೊಳಿಸಿತ್ತು” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚನ್ನಪ್ಪಗೌಡ ನೆಲ್ಲೂರು, ಸುರೇಶ್ ರಾಥೋಡ್, ಮುರುಳಿ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.