ಐಪಿಎಲ್’ನಲ್ಲಿ ವೇಗದ ದಾಖಲೆ ಬರೆದ ಉಮ್ರಾನ್ ಮಲಿಕ್ !

Prasthutha|

ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವೇಗದ ಬೌಲಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಹೊಸ ದಾಖಲೆ ಸೃಷ್ಠಿಸಿದ್ದಾರೆ. ಸನ್ರೈಸರ್ಸ್ ಹೈದ್ರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಬೌಲರ್ ಉಮ್ರಾನ್ ಮಲಿಕ್, ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ಗುಜರಾತ್ ಟೈಟನ್ಸ್ನ ಬೌಲರ್ ಲ್ಯುಕಿ ಫರ್ಗುಸನ್ ಹೆಸರಲ್ಲಿದ್ದ ಸ್ಪೀಡ್ ಸ್ಟಾರ್ ದಾಖಲೆಯನ್ನ ತಮ್ಮದಾಗಿಸಿಕೊಂಡಿದ್ದಾರೆ.

- Advertisement -


ಚೆನ್ನೈ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಎಸೆದ 10ನೇ ಓವರ್ನ ಎರಡನೇ ಎಸೆತ 154kmph ವೇಗ ದಾಖಲಿಸಿತ್ತು. ಆದರೆ ಈ ಎಸೆತವನ್ನು ಋತುರಾಜ್ ಗಾಯಕ್ವಾಡ್ ಬೌಂಡರಿಗಟ್ಟಿದ್ದರು. ಇದು ಮಲಿಕ್ ಸ್ಪೆಲ್ನ ಎರಡನೇ ಓವರ್ನ ಎರಡನೇ ಎಸೆತವಾಗಿತ್ತು. ಬಳಿಕ 19ನೇ ಓವರ್ನಲ್ಲಿ ಗಂಟೆಗೆ 154 ಕಿ.ಮೀ. ವೇಗದಲ್ಲಿ ಎಂಎಸ್ ಧೋನಿಗೆ ಯಾರ್ಕರ್ ಅನ್ನು ಎಸೆದರು. ಈ ಎಸೆತದಲ್ಲಿ ಧೋನಿ ಒಂದು ರನ್ ಗಳಿಸಿದರು. 4 ಓವರ್ ಎಸೆದು 48 ರನ್ ನೀಡಿದರೂ, ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾದರು.


ರಾಜಸ್ಥಾನ್ ರಾಯಲ್ಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲೇ ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡೆಸೆದು ಮಲಿಕ್ ಸುದ್ದಿಯಾಗಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಶರವೇಗದಲ್ಲಿ ಬೌಲಿಂಗ್ ಮಾಡಿ, ಮೊದಲ ಬಾರಿ ಐದು ವಿಕೆಟ್ ಗೊಂಚಲು ಗಳಿಸಿ ವ್ಯಾಪಕ ಪ್ರಶಂಸೆ ಪಡೆದಿದ್ದರು. ಈ ಬಾರಿಯ ಮೆಗಾ ಹರಾಜಿಗೂ ಮುನ್ನ 4 ಕೋಟಿ ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡವು. ಉಮ್ರಾನ್ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಇದಕ್ಕೂ ಮೊದಲು 153.9kmph ವೇಗದಲ್ಲಿ ಬೌಲಿಂಗ್ ಮಾಡಿದ್ದ ನ್ಯೂಜಿಲೆಂಡ್ ಮೂಲದ, ಗುಜರಾತ್ ಟೈಟನ್ಸ್ ತಂಡದ ಲ್ಯುಕಿ ಫರ್ಗುಸನ್ ದಾಖಲೆ ಬರೆದಿದ್ದರು.



Join Whatsapp