ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ಹಲವು ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ದೆಹಲಿಯಲ್ಲಿ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದೆ. ದೇಶಾದ್ಯಂತ ರೈತರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ದೆಹಲಿಗೆ ಪ್ರವೇಶಿಸುವ ಎಲ್ಲಾ ಐದು ಪ್ರವೇಶ ಮಾರ್ಗಗಳನ್ನೂ ಮುಚ್ಚುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗೆ ಸರಕಾರ ನಿಗದಿ ಮಾಡಿರುವ ದೆಹಲಿಯ ಬುರಾಡಿ ಮೈದಾನಕ್ಕೆ ತೆರಳಿದ ನಂತರ ಮಾತುಕತೆ ನಡೆಸಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ವಿಧಿಸಿರುವ ಷರತ್ತು ನಮಗೆ ಒಪ್ಪಿತವಾಗಿಲ್ಲ. ನಾವು ಯಾವುದೇ ಷರತ್ತುಬದ್ಧ ಮಾತುಕತೆಗಳನ್ನು ನಡೆಸುವುದಿಲ್ಲ. ಸರಕಾರದ ಪ್ರಸ್ತಾಪವನ್ನು ನಾವು ತಿರಸ್ಕರಿಸುತ್ತೇವೆ. ಇಲ್ಲಿ ನಡೆಯುತ್ತಿರುವ ನಮ್ಮ ಹೋರಾಟ ಕೊನೆಗೊಳ್ಳುವುದಿಲ್ಲ. ದೆಹಲಿ ಪ್ರವೇಶಿಸುವ ಎಲ್ಲಾ ಐದು ಮಾರ್ಗಗಳನ್ನು ನಾವು ಬಂದ್ ಮಾಡುತ್ತೇವೆ ಎಂದು ಪಂಜಾಬ್ ನ ಭಾರತೀಯ ಕಿಸಾನ್ ಯೂನಿಯನ್ ನ ಅಧ್ಯಕ್ಷ ಸುರ್ಜೀತ್ ಎಸ್ ಫೂಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.