ಹೊಸದಿಲ್ಲಿ: ಮುಂಬೈನಿಂದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ, ಲ್ಯಾಂಡಿಂಗ್ ವೇಳೆ ಭಾರೀ ಬಿರುಗಾಳಿಯಿಂದ ಸಂಭವಿಸಿದ ಅನಾಹುತದಲ್ಲಿ 40 ಮಂದಿ ಗಾಯಗೊಂಡ ಘಟನೆಯು ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನವು ಲ್ಯಾಂಡ್ ಆಗಲು ಪ್ರಾರಂಭಿಸಿದಾಗ ಅಲುಗಾಡಲು ಪ್ರಾರಂಭಿಸಿತು. ಭಾರಿ ಪ್ರಕ್ಷುಬ್ಧತೆಯ ಕಾರಣ ಕ್ಯಾಬಿನ್ ನಲ್ಲಿದ್ದ ಸಾಮಾಗ್ರಿಗಳು ಪ್ರಯಾಣಿಕರ ಮೇಲೆ ಬಿದ್ದವು.10 ಮಂದಿಗೆ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಆದರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮೇ 1ರಂದು ಸ್ಪೈಸ್ಜೆಟ್ 737 ವಿಮಾನ ಎಸ್ಜಿ-945 ಆಗಿ ಮುಂಬೈನಿಂದ ಟೇಕ್ ಆಫ್ ಆಗಿತ್ತು. ವಿಮಾನ ಇಳಿಯುವ ಸಂದರ್ಭ ಸಾಕಷ್ಟು ಬಿರುಗಾಳಿ ಕಂಡುಬಂದಿದ್ದು, ದುರಾದೃಷ್ಟವಶಾತ್ ಕೆಲ ಪ್ರಯಾಣಿಕರಿಗೆ ಗಾಯಗಳಾಗಿವೆ. ದುರ್ಗಾಪುರದಲ್ಲಿ ಅವರು ಇಳಿಯುತ್ತಿದ್ದಂತೆ ಸೂಕ್ತ ವೈದ್ಯಕೀಯ ನೆರವು ನೀಡಲಾಗಿದೆ. ಈ ದುರದೃಷ್ಟಕರ ಘಟನೆಗೆ ಸ್ಪೈಸ್ಜೆಟ್ ವಿಷಾದ ವ್ಯಕ್ತಪಡಿಸುತ್ತದೆ ಹಾಗೂ ಗಾಯಾಳುಗಳಿಗೆ, ಸಾಧ್ಯವಿರುವ ಎಲ್ಲ ವೈದ್ಯಕೀಯ ನೆರವು ನೀಡಲಾಗುವುದು” ಎಂದು ಸ್ಪೈಸ್ ಜೆಟ್ ವಕ್ತಾರ ಹೇಳಿದ್ದಾರೆ.
ವಿಮಾನವು ಚಂಡಮಾರುತಕ್ಕೆ ಹೇಗೆ ಸಿಲುಕಿತು ಎಂಬುದನ್ನು ಖಚಿತ ಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.