ಪ್ರತಿಷ್ಠಿತ ಸ್ಪಾನಿಷ್ ಫುಟ್ಬಾಲ್ ಟೂರ್ನಿ ʼ ಲಾ ಲೀಗಾʼದಲ್ಲಿ ಬಲಿಷ್ಠ ರಿಯಲ್ ಮ್ಯಾಡ್ರಿಡ್ ತಂಡ ದಾಖಲೆಯ 35ನೇ ಬಾರಿಗೆ ಕಿರೀಟ ಗೆದ್ದು ಇತಿಹಾಸ ನಿರ್ಮಿಸಿದೆ. ಎಸ್ಪಾನಿಯಲ್ ತಂಡದ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 4-0 ಅಂತರದಿಂದ ಗೆಲುವು ಸಾಧಿಸಿದ ಬಳಿಕ ರಿಯಲ್ ಮ್ಯಾಡ್ರಿಡ್ ಅಧಿಕೃತವಾಗಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಪ್ರಸಕ್ತ ಆವೃತ್ತಿಯಲ್ಲಿ ಇನ್ನೂ 4 ಪಂದ್ಯಗಳು ಬಾಕಿ ಇರುವಂತೆಯೇ ಕಾರ್ಲೋ ಎನ್ಸಲೊಟ್ಟಿ ಬಳಗ ಪ್ರಶಸ್ತಿ ಗೆದ್ದು ಬೀಗಿದೆ. ಒಟ್ಟು 34 ಪಂದ್ಯಗಳನ್ನು ಆಡಿರುವ ರಿಯಲ್ ಮ್ಯಾಡ್ರಿಡ್, 25 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಕೇವಲ ಮೂರು ಪಂದ್ಯಗಳಲ್ಲಿಸೋಲನುಭವಿಸಿದೆ. ಉಳಿದಂತೆ ಆರು ಪಂದ್ಯಗಳು ಡ್ರಾದಲ್ಲಿ ಅಂತ್ಯಕಂಡಿವೆ. ಆ ಮೂಲಕ ಮೂರು ವರ್ಷದ ಅವಧಿಯಲ್ಲಿ ರಿಯಲ್ ಮ್ಯಾಡ್ರಿಡ್ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಎರಡನೇ ಸ್ಥಾನದಲ್ಲಿರುವ ಸೆವಿಲ್ಲಾ ಇದುವರೆಗೂ34 ಪಂದ್ಯಗಳನ್ನು ಆಡಿದ್ದು, 17 ಪಂದ್ಯಗಳಲ್ಲಿ ಗೆಲುವು, 13 ಪಂದ್ಯಗಳಲ್ಲಿ ಡ್ರಾ ಸಾಧಿಸುವ ಮೂಲಕ 64 ಅಂಕಗಳನ್ನು ಹೊಂದಿದೆ.
ಮತ್ತೊಂದೆಡೆ ರಿಯಲ್ ಮ್ಯಾಡ್ರಿಡ್ ಬದ್ಧ ಎದುರಾಳಿ ಬಾರ್ಸಿಲೋನಾ ತಂಡ ಮೆಸ್ಸಿ ನಿರ್ಗಮನದ ಬಳಿಕ ಮಂಕಾಗಿದ್ದು, ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. 33 ಪಂದ್ಯಗಳನ್ನು ಆಡಿರುವ ಬಾರ್ಸಿಲೋನಾ ಬಳಿ 63 ಅಂಕಗಳಿವೆ. ಬಾರ್ಸಿಲೋನಾ ಇದುವರೆಗೂ 26 ಬಾರಿ ಲಾ ಲೀಗಾ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸ್ಯಾಂಟಿಯಾಗೋ ಬರ್ನೆಬ್ಯೂ ಮೈದಾನದಲ್ಲಿ ನಡೆದ ಎಸ್ಪಾನಿಯಲ್ ವಿರುದ್ಧದ ಪಂದ್ಯದ ಮೊದಲಾರ್ಧದ 33 ಮತ್ತು 43ನೇ ನಿಮಿಷದಲ್ಲಿ ರೋಡ್ರಿಗೋ ಗೋಲು ದಾಖಲಿಸಿದರೆ, ದ್ವಿತಿಯಾರ್ಧದ 55ನೇ ನಿಮಿಷದಲ್ಲಿ ಮಾರ್ಕೊ ಅಸೆನ್ಸಿಯೋ ಹಾಗೂ81ನೇ ನಿಮಿಷದಲ್ಲಿ ಸ್ಟಾರ್ ಸ್ಟ್ರೈಕರ್ ಕರೀಮ್ ಬೆಂಝೆಮಾ ನಾಲ್ಕನೇ ಗೋಲು ಗಳಿಸಿದರು.
ಈ ಗೆಲುವಿನ ಮೂಲಕ ಮುಖ್ಯ ಕೋಚ್ ಕಾರ್ಲೋ ಎನ್ಸಲೊಟ್ಟಿ, ಪ್ರೀಮಿಯರ್ ಲೀಗ್, ಬುಂಡಸ್ಲೀಗಾ, ಸೀರಿಸ್, ಲೀಗ್-1, ಹಾಗೂ ಲ ಲೀಗಾದಲ್ಲಿ ಪ್ರಶಸ್ತಿ ಗೆದ್ದ ಮೊತ್ತ ಮೊದಲ ಮ್ಯಾನೇಜರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೇ 5ರಂದು ನಡೆಯುವ ಚಾಂಪಿಯನ್ಸ್ ಲೀಗ್ನ ದ್ವೀತಿಯ ಚರಣದ ಸೆಮಿಫೈನಲ್ನಲ್ಲಿ ರಿಯಲ್ ಮ್ಯಾಡ್ರಿಡ್ , ಇಂಗ್ಲಿಷ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿ ತಂಡವನ್ನು ಎದುರಿಸಲಿದೆ. ಎತ್ತಿಹಾದ್ ಮೈದಾನದಲ್ಲಿ ನಡೆದ ಮೊದಲ ಚರಣದ ಪಂದ್ಯದಲ್ಲಿ ಅತಿಥೇಯ ಮ್ಯಾಂಚೆಸ್ಟರ್ ಸಿಟಿ 4-3 ಅಂತರದಲ್ಲಿ ರಿಯಲ್ ಮ್ಯಾಡ್ರಿಡ್ ತಂಡವನ್ನು ಮಣಿಸಿತ್ತು.
ಲಾ ಲೀಗಾ: ದಾಖಲೆಯ 35ನೇ ಬಾರಿಗೆ ಕಿರೀಟ ಗೆದ್ದ ರಿಯಲ್ ಮ್ಯಾಡ್ರಿಡ್
Prasthutha|