ಮುಂಬೈ: ಧ್ವನಿವರ್ಧಕಗಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಈ ಕುರಿತಂತೆ ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಿಜೆಪಿ ವಿರೋಧಿಸಿತ್ತು. ಇನ್ನು ಮಾಧ್ಯಮದವರೊಂದಿಗೆ ಮಾತನಾಡಿದ ಸಂಜಯ್ ರಾವತ್ ಅವರು, ಧ್ವನಿವರ್ಧಕ ವಿಚಾರವಾಗಿ ನ್ಯಾಯಾಲಯ ನೀಡಿರುವ ಆದೇಶವನ್ನು ಅನುಸರಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ರಾಜ್ಯ ಗೃಹ ಸಚಿವರು ಎಲ್ಲಾ ಪಕ್ಷಗಳನ್ನು ಸಭೆಗೆ ಕರೆದಿದ್ದರು. ಆದರೆ ಬಿಜೆಪಿ ಮಾತ್ರ ಸಭೆಗೆ ಹಾಜರಾಗುವುದನ್ನು ವಿರೋಧಿಸಿತು. ಇದರರ್ಥ ಬಿಜೆಪಿಯವರು ಧ್ವನಿವರ್ಧಕಗಳ ವಿಚಾರದಲ್ಲಿ ರಾಜಕೀಯ ಮಾಡಲು ಮತ್ತು ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ರಾಜ್ಯಾದ್ಯಂತ ಧ್ವನಿವರ್ಧಕ ನಿಷೇಧದ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಜೊತೆ ವಾಗ್ವಾದ ನಡೆಸುತ್ತಿವೆ. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ ಮತ್ತು ಮೇ 4 ರಂದು ಪೊಲೀಸರಿಗೆ ಗಡುವು ನೀಡಿವೆ.