ಕಲ್ಲಿದ್ದಲು ಕೊರತೆ | ದೆಹಲಿಯ ಮೆಟ್ರೋ, ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆ ಬಂದ್ ಸಾಧ್ಯತೆ!

Prasthutha|

ನವದೆಹಲಿ: ಕಲ್ಲಿದ್ದಲು ಕೊರತೆಯ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ ದೆಹಲಿ ಸರ್ಕಾರವು ಮೆಟ್ರೋ ರೈಲು, ಆಸ್ಪತ್ರೆ ಸೇರಿದಂತೆ ರಾಜಧಾನಿಯ ಹಲವು ಪ್ರಮುಖ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸರಜರಾಜು ಮಾಡಲು ಸಾಧ್ಯವಿಲ್ಲದಿರುವ ಬಗ್ಗೆ ಎಚ್ಚರಿಕೆ ನೀಡಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ದೆಹಲಿ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್, ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಸಭೆ ಕರೆಯಲಾಗಿದೆ ಮತ್ತು ದೆಹಲಿಗೆ ವಿದ್ಯುತ್ ಸರಬರಾಜು ಮಾಡುವ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಲಭ್ಯತೆಯನ್ನು ಖಚಿತಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

“ದಾದ್ರಿ-II ಮತ್ತು ಉಂಚಹಾರ್ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಿಂದಾಗಿ ದೆಹಲಿ ಮೆಟ್ರೋ ಮತ್ತು ದೆಹಲಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಅನೇಕ ಅಗತ್ಯ ಸಂಸ್ಥೆಗಳಿಗೆ 24 ಗಂಟೆಗಳ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಬಹುದು” ಎಂದು ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

- Advertisement -

ಪ್ರಸ್ತುತ ದೆಹಲಿಯ ವಿದ್ಯುತ್ ಬೇಡಿಕೆಯ 25-30 ಶೇಕಡಾವನ್ನು ಈ ವಿದ್ಯುತ್ ಕೇಂದ್ರಗಳ ಮೂಲಕ ಪೂರೈಸಲಾಗುತ್ತಿದೆ ಮತ್ತು ಅಲ್ಲಿ ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಜೈನ್ ತಿಳಿಸಿದ್ದಾರೆ.

ದೆಹಲಿ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಜನರು ವಿದ್ಯುತ್ ಕಡಿತವನ್ನು ಎದುರಿಸದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಾದ್ರಿ-II, ಉಂಚಹಾರ್, ಕಹಲ್ಗಾಂವ್, ಫರಕ್ಕಾ ಮತ್ತು ಝಜ್ಜರ್ ವಿದ್ಯುತ್ ಸ್ಥಾವರಗಳು ದೆಹಲಿಗೆ ದಿನಕ್ಕೆ 1,751 ಮೆಗಾವ್ಯಾಟ್ (MW) ವಿದ್ಯುತ್ ಪೂರೈಸುತ್ತವೆ. ದಾದ್ರಿ-II ಪವರ್ ಸ್ಟೇಷನ್‌ನಿಂದ ರಾಜಧಾನಿಯು ಗರಿಷ್ಠ 728 ಮೆಗಾವ್ಯಾಟ್ ಪೂರೈಕೆಯನ್ನು ಪಡೆಯುತ್ತದೆ. ಉಂಚಹಾರ್ ಕೇಂದ್ರದಿಂದ 100 ಮೆಗಾವ್ಯಾಟ್ ಪಡೆಯುತ್ತದೆ.

ನ್ಯಾಷನಲ್ ಪವರ್ ಪೋರ್ಟಲ್‌ನ ದೈನಂದಿನ ಕಲ್ಲಿದ್ದಲು ವರದಿಯ ಪ್ರಕಾರ ಈ ಎಲ್ಲಾ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ ಎಂದು ಹೇಳಲಾಗಿದೆ.



Join Whatsapp