ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಬೆನ್‌ ಸ್ಟೋಕ್ಸ್‌ ನೂತನ ನಾಯಕ

Prasthutha|

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕನಾಗಿ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ನೇಮಿಸಿದೆ. ಇಂಗ್ಲೆಂಡ್ ಕ್ರಿಕೆಟ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಟೋಕ್ಸ್ ನೇಮಕದ ಮಾಹಿತಿಯನ್ನು ಹಂಚಿಕೊಂಡಿದೆ.

- Advertisement -

ಆಸ್ಟ್ರೇಲಿಯ ವಿರುದ್ಧದ ಆಶಸ್ ಸರಣಿಯಲ್ಲಿ 4-0 ಅಂತರದಿಂದ ʻವೈಟ್‌ ವಾಷ್‌ʼ ಅನುಭವಿಸಿದ್ದ ಇಂಗ್ಲೆಂಡ್, ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಹೀನಾಯವಾಗಿ ಸೋಲನುಭವಿಸಿತ್ತು. 2017ರಲ್ಲಿ ಇಂಗ್ಲೆಂಡ್ ತಂಡದ ನಾಯಕನಾಗಿ ನೇಮಕವಾಗಿದ್ದ ಜೋ ರೂಟ್, 64 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 27 ಪಂದ್ಯಗಳಲ್ಲಿ ಗೆಲುವು, 26 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. 

ಕೊನೆಯದಾಗಿ ಆಡಿರುವ 17 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕೇವಲ 1 ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಈ ಹಿನ್ನೆಲೆಯಲ್ಲಿ ಟೆಸ್ಟ್ ನಾಯಕತ್ವಕ್ಕೆ ಸ್ಥಾನಕ್ಕೆ ಜೋ ರೂಟ್ ಈ ತಿಂಗಳ ಆರಂಭದಲ್ಲಿ ರಾಜೀನಾಮೆ ನೀಡಿದ್ದರು. ಸದ್ಯ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್‌ನ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಕೊನೆಯ ಸ್ಥಾನದಲ್ಲಿದೆ. 

- Advertisement -

ಇಂಗ್ಲೆಂಡ್ ತಂಡದ 81ನೇ ನಾಯಕನಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್, ʻಟೆಸ್ಟ್ ತಂಡದ ನಾಯಕತ್ವದ ಅವಕಾಶ ಸಿಕ್ಕಿರುವುದು ನನಗೆ ಗೌರವ ತಂದಿದೆ. ಇದೊಂದು ದೊಡ್ಡ ವಿಚಾರ. ಇಂಗ್ಲೆಂಡ್ ಕ್ರಿಕೆಟ್‌ಗಾಗಿ ಜೋ ರೂಟ್ ನೀಡಿರುವ ಕೊಡುಗೆಗಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ರೂಟ್ ಪ್ರಪಂಚದಾದ್ಯಂತ ಕ್ರೀಡಾ ರಾಯಭಾರಿಯಾಗಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನನ್ನನ್ನು ನಾಯಕನಾಗಿ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ.

2013ರಲ್ಲಿ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸ್ಟೋಕ್ಸ್, ಇದುವರೆಗೂ 79 ಪಂದ್ಯಗಳಾಡಿದ್ದಾರೆ. 2017ರಿಂದ ಉಪನಾಯಕನಾಗಿರುವ ಜವಾಬ್ದಾರಿ ನಿಭಾಯಿಸುತ್ತಿರುವ ಸ್ಟೋಕ್ಸ್,  ಜೋ ರೂಟ್ ಅನುಪಸ್ಥಿತಿಯಲ್ಲಿ ಕೆಲ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಜೂನ್ 2 ರಂದು ಲಾರ್ಡ್ಸ್ ನಲ್ಲಿ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಆರಂಭವಾಗುವ ಪಂದ್ಯದ ಮೂಲಕ ಸ್ಟೋಕ್ಸ್,  ಟೆಸ್ಟ್ ನಾಯಕನ ಇನ್ನಿಂಗ್ಸ್ ಆರಂಭಿಸಲಿದ್ದಾರೆ.



Join Whatsapp