ಮಂಗಳೂರು: ಯುವಕನೊಬ್ಬನನ್ನು ತಂಡವೊಂದು ಕೊಲೆಗೈದ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ನಡೆದಿದೆ.
ರಾಹುಲ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಈತ ರೌಡಿಶೀಟರ್ ಎನ್ನಲಾಗಿದ್ದು, ವೈಯಕ್ತಿಕ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.
ರಾಹುಲ್ ನನ್ನು ಎಮ್ಮೆಕೆರೆ ತಂಡದ ಮಹೇಂದ್ರ ಮತ್ತಿತರ ನಾಲ್ಕು ಮಂದಿ ಯುವಕರು ಸೇರಿ ಕೊಂದು ಹಾಕಿದ್ದು, ಹಳೆ ದ್ವೇಷದಲ್ಲಿ ಹಗೆ ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಕ್ಕೆ ರಾಹುಲ್ ಹೊಯ್ಗೆಬಜಾರ್ ನಿವಾಸಿಯಾಗಿದ್ದು ಅಲ್ಲಿನ ರೌಡಿ ತಂಡದಲ್ಲಿ ಗುರುತಿಸಿಕೊಂಡಿದ್ದ. ಎರಡು ವರ್ಷಗಳ ಹಿಂದೆ ಇದೇ ರಾಹುಲ್, ಎಮ್ಮೆಕೆರೆಯ ಹುಲಿ ತಂಡದ ಸದಸ್ಯರೊಬ್ಬರ ಮನೆಯಲ್ಲಿ ಜಗಳ ಮಾಡಿ ಮಹೇಂದ್ರ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದ. ಇದೇ ದ್ವೇಷದಲ್ಲಿದ್ದ ತಂಡ ಇಂದು ರಾಹುಲ್ ಎಮ್ಮೆಕೆರೆಯ ಕೋಳಿ ಅಂಕ ನಡೆಯುತ್ತಿದ್ದಲ್ಲಿಗೆ ಬಂದಿದ್ದಾಗ ಹಳೆ ದ್ವೇಷವನ್ನು ಕೊಲೆಯ ಮೂಲಕ ತೀರಿಸಿದ್ದಾರೆ ಎಂದು ತಿಳಿದು ಬಂದಿದೆ.