ಇನ್ನು ಹೈದರಾಬಾದ್ ನಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಬಾಕಿ ಉಳಿದಿರುವ ಏಕೈಕ ವ್ಯಕ್ತಿಯೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದಿನ್ ಓವೈಸಿ ಟೀಕಿಸಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್(ಜಿ.ಹೆಚ್.ಎಂ.ಸಿ) ಚುನಾವಣೆಗೆ ಉನ್ನತ ನಾಯಕರನ್ನು ಪ್ರಚಾರ ಕಣಕ್ಕೆ ನಿಯೋಜಸಿರುವ ಬಿಜೆಪಿಯ ನಡೆಯನ್ನು ಟೀಕಿಸಿರುವ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
“ಬಿಜೆಪಿ ಪರ ನಾಯಕರು ಪ್ರಚಾರ ನಡೆಸುತ್ತಿರುವ ರೀತಿ ನೋಡಿದರೆ, ಇದು ಹೈದರಾಬಾದ್ ಚುನಾವಣೆಯಂತೆ ಕಾಣುತ್ತಿಲ್ಲ. ನಾನು ಕಾರ್ವಾನ್ ನಲ್ಲಿ ನಡೆದ ರ್ಯಾಲಿಯಲ್ಲಿದ್ದೆ. ಎಲ್ಲರನ್ನು ಕರೆಯಲಾಗಿತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಮಾತ್ರ ಉಳಿದಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಹೈದರಾಬಾದ್ ನಲ್ಲಿ ತೀವ್ರವಾದ ಮತದಾನ ಅಭಿಯಾನವನ್ನು ಕೈಗೊಳ್ಳುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ ಮತ್ತು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಅವರು ಹೈದರಾಬಾದ್ ನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ.
150 ಸದಸ್ಯರ ಜಿ.ಹೆಚ್.ಎಂ.ಸಿಗೆ ಚುನಾವಣೆ ಡಿಸೆಂಬರ್ 1ರಂದು ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 4ರಂದು ನಡೆಯಲಿದೆ.