ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಪಿಎಸ್ ಐ ಅಕ್ರಮ ನೇಮಕಾತಿಯ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಒಂದು ವಾರದೊಳಗೆ ಶರಣಾಗದಿದ್ದರೆ ನ್ಯಾಯಾಲಯ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವಂತೆ ಸೂಚಿಸಿತ್ತು. ಈ ಸಂಬಂಧ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಟ್ವೀಟ್ ಮೂಲಕ ಬಿಜೆಪಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್, PSI ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಶರಣಾಗದಿದ್ದರೆ ಆಸ್ತಿ ಜಪ್ತಿ ಮಾಡಲು ನ್ಯಾಯಾಲಯ ಅದೇಶಿಸಿದ್ದು ಸರ್ಕಾರ ಅಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದಿದೆ. ಆರೋಪಿಯನ್ನು ರಕ್ಷಿಸುತ್ತಿರುವ ಸರ್ಕಾರಕ್ಕೆ ಈ ಆದೇಶ ಕಪಾಳಮೋಕ್ಷದಂತೆಯೇ ಸರಿ, ಅಲ್ಲದೇ ‘ಬುಲ್ಡೋಝರ್ ಕ್ರಮ’ ಕಲ್ಲು ಹೊಡೆದವರಿಗೆ ಮಾತ್ರವೇ? ನೂರಾರು ಕೋಟಿಯ ಅಕ್ರಮದವರಿಗಿಲ್ಲವೇ? ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ದಿವ್ಯಾ ಹಾಗರಗಿ ಸೇರಿದಂತೆ ಇನ್ನುಳಿದ ಆರೋಪಿಗಳು ಒಂದು ವಾರದ ಒಳಗಡೆ ಶರಣಾಗದಿದ್ದರೆ, ಉದ್ಘೋಷಿತ ಅಪರಾಧಿ ಎಂದು ಆಸ್ತಿ ಮುಟ್ಟುಗೋಲು ಹಾಕುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಕಳೆದ 15 ದಿನಗಳಿಂದ ದಿವ್ಯಾ ಸೇರಿ 6 ಮಂದಿ ಆರೋಪಿಗಳು ಸಿಐಡಿಯಿಂದ ತಲೆ ಮರೆಸಿಕೊಂಡಿದ್ದಾರೆ.