ಮುಸ್ಲಿಮ್ ವ್ಯಾಪಾರಿಗೆ ಅಡ್ಡಿಪಡಿಸಿದ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಿದ ಪ್ರಕರಣ: ಬಜ್ಪೆ ಇನ್ಸ್’ಪೆಕ್ಟರ್ ಸಂದೇಶ್ ಅಮಾನತು!

Prasthutha|

►►ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಅಮಾನತು ಎಂದ ಇಲಾಖೆ !

- Advertisement -

ಬಜ್ಪೆ: ಮುಸ್ಲಿಂ ಎಳನೀರು ವ್ಯಾಪಾರಿಯ ವ್ಯಾಪಾರಕ್ಕೆ ಸಂಘಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ್ದಕ್ಕಾಗಿ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಬಜ್ಪೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್’ಪೆಕ್ಟರ್ ಸಂದೇಶ್’ರನ್ನು ಅಮಾನತುಗೊಳಿಸಲಾಗಿದೆ. ಇಸ್ಮಾಯಿಲ್ ಎನ್ನುವ ಮುಸ್ಲಿಂ ಎಳನೀರು ವ್ಯಾಪಾರಿ ಕಳೆದ ಹದಿನೈದು ವರ್ಷಗಳಿಂದ ಕಟೀಲು ದೇವಸ್ಥಾನದ ಆಸುಪಾಸಿನ ಅಂಗಡಿಗಳಿಗೆ ಎಳೆನೀರು ಪೂರೈಕೆ ವ್ಯಾಪಾರ ಮಾಡುತ್ತಿದ್ದರು. ಆದರೆ ಕಳೆದ ಶನಿವಾರ ರಾತ್ರಿಯ ವೇಳೆ ಸಂಘಪರಿವಾರದ ಕಾರ್ಯಕರ್ತರು ಏಕಾಏಕಿ ಬಂದು ಅಡ್ಡಿ ಪಡಿಸಿದ್ದಾರೆ.

ಈ ಬಗ್ಗೆ ‘ಪ್ರಸ್ತುತ’ ನ್ಯೂಸ್ ಜೊತೆ ಮಾತನಾಡಿದ ಸಂತ್ರಸ್ತ ವ್ಯಾಪಾರಿ ಇಸ್ಮಾಯಿಲ್, ನಾನು ಕಟೀಲು ದೇವಸ್ಥಾನದ ಆಸುಪಾಸಿನ ಅಂಗಡಿಗಳಿಗೆ ಎಳೆನೀರು ಪೂರೈಕೆ ಮಾಡುತ್ತಿದ್ದ ವೇಳೆ ಸಂಘಪರಿವಾರದ ಕೆಲ ಕಾರ್ಯಕರ್ತರು ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಅಡ್ಡಿಪಡಿಸುತ್ತಿದ್ದರು. ಅವರು, “ನೀವು ದನದ ಮಾಂಸ ತಿನ್ನುವವರು ನಿಮಗೆ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ನಿಂದಿಸಿ ಸ್ಥಳದಿಂದ ಹೋಗುವಂತೆ ಸೂಚಿಸಿದ್ದಾರೆ. ಕಳೆದ ಶನಿವಾರ ಕೂಡಾ ಇದೇ ರೀತಿ ಅಡ್ಡಿಪಡಿಸಿದಾಗ ನಾನು ಬಜ್ಪೆ ಠಾಣೆಗೆ ಕರೆ ಮಾಡಿ ವ್ಯಾಪಾರಕ್ಕೆ ಅಡ್ಡಿಪಡಿಸಿರುವುದಾಗಿ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.

- Advertisement -

ಘಟನೆ ನಡೆದ ಮರುದಿನ (ಆದಿತ್ಯವಾರ) ಬಜ್ಪೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಸಂಘಪರಿವಾರದ ಕಾರ್ಯಕರ್ತ ಮಹೇಶ್ ಕಟೀಲ್ ಸಹಿತ ಮೂವರನ್ನು ಬಂಧಿಸಿ ವಿಚಾರಣೆಗೆಂದು ಕರೆದೊಯ್ದಿದ್ದಾರೆ. ಆ ಬಳಿಕ ಠಾಣಾ ಮುಂಭಾಗ ರಾದ್ದಾಂತ ಸೃಷ್ಟಿಸಿದ್ದ ನೂರಕ್ಕೂ ಅಧಿಕ ಸಂಘಪರಿವಾರದ ಕಾರ್ಯಕರ್ತರು, ಪೊಲೀಸ್ ಇನ್ಸ್’ಪೆಕ್ಟರ್ ಸಂದೇಶ್ ನಮ್ಮ ಕಾರ್ಯಕರ್ತರಿಗೆ ಬೇಕಾಬಿಟ್ಟಿ ಥಳಿಸಿದ್ದಾರೆಂದು ಆರೋಪಿಸಿ ಪ್ರತಿಭಟಿಸಿದ್ದರು. ಇದೀಗ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಸರ್ಕಲ್ ಇನ್ಸ್’ಪೆಕ್ಟರ್ ಸಂದೇಶ್ ರನ್ನುಸಂಘಪರಿವಾರದ ಒತ್ತಡಕ್ಕೆ ಒಳಗಾಗಿ ಅಮಾನತು ಮಾಡಲಾಗಿದೆ.
ತನ್ನ ಅಮಾನತಿನ ಬಗ್ಗೆ ‘ಪ್ರಸ್ತುತ ನ್ಯೂಸ್’ ಜೊತೆ ಮಾತನಾಡಿದ ಇನ್ಸ್’ಪೆಕ್ಟರ್ ಸಂದೇಶ್, ವ್ಯಾಪಾರಕ್ಕೆ ಅಡ್ಡಿಪಡಿಸಿದ ಘಟನೆಗ್ ಸಂಬಂಧಪಟ್ಟಂತೆ ಈ ಆರೋಪಿಗಳಿಗೆ ಕಳೆದ ಕೆಲವು ದಿನಗಳ ಹಿಂದೆ ಎಚ್ಚರಿಕೆ ಕೊಡಲಾಗಿತ್ತು. ಆದರೂ ಅವರು ತಮ್ಮ ಗೂಂಡಾ ಪ್ರವೃತ್ತಿಯನ್ನು ಪುನರಾವರ್ತನೆ ಮಾಡಿದ್ದರಿಂದ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದಿದ್ದಾರೆ. ಬಳಿಕ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನನ್ನನ್ನು ಈಗ ಅಮಾನತು ಮಾಡಲಾಗಿದೆ ಎಂಬ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ಪ್ರತಿಕ್ರಿಯೆಗಾಗಿ ‘ಪ್ರಸ್ತುತ ನ್ಯೂಸ್’ ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.



Join Whatsapp