ಬೆಂಗಳೂರು: ಮುಕ್ತ, ಸ್ವತಂತ್ರ ಮತ್ತು ನಿರ್ಭೀತ ಪತ್ರಿಕಾ ಮಾಧ್ಯಮವಿಲ್ಲದೆ ಸದೃಢ ಮತ್ತು ಸಕ್ರಿಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಪ್ರತಿಪಾದಿಸಿದ್ದಾರೆ.
ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಲು ಭಾರತಕ್ಕೆ ಸದೃಢ, ಸ್ವತಂತ್ರ ಮತ್ತು ಸಕ್ರಿಯ ಮಾಧ್ಯಮದ ಅಗತ್ಯವಿದೆ ಎಂದು ಸಲಹೆ ನೀಡಿದ ವೆಂಕಯ್ಯ ನಾಯ್ಡು ಅವರು ಮಾಧ್ಯಮಗಳಲ್ಲಿನ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು. ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿಗಾರಿಕೆಗೆ ಕರೆ ನೀಡಿದ ಅವರು, “ಸುದ್ದಿಯನ್ನು ಅಭಿಪ್ರಾಯಗಳೊಂದಿಗೆ ಬೆರೆಸಬಾರದು’’ ಎಂದು ಅವರು ಒತ್ತಿ ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್ ನ 50 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರೆಸ್ ಕ್ಲಬ್ ನಲ್ಲಿ ಅಲ್ಲಿ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಗಳು, ಸಾಂವಿಧಾನಿಕ ಕಾನೂನಿನ ನಿಯಮವನ್ನು ಬಲಪಡಿಸುವ ವಿಚಾರಕ್ಕೆ ಬಂದರೆ, ಮುಕ್ತ ಮತ್ತು ನ್ಯಾಯಸಮ್ಮತ ಮಾಧ್ಯಮ ಸ್ವತಂತ್ರ ನ್ಯಾಯಾಂಗಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೆ ಪತ್ರಿಕೋದ್ಯಮದಲ್ಲಿ ಸುದ್ದಿಯನ್ನು ಪವಿತ್ರವಾದ ಒಂದು ಧ್ಯೇಯವೆಂದು ಪರಿಗಣಿಸಲಾಗಿತ್ತು ಎಂದು ವೆಂಕಯ್ಯ ನಾಯ್ಡು ಅವರು ಉತ್ತಮ ಪತ್ರಿಕೋದ್ಯಮವು ಘಟನೆಗಳ ನಿಷ್ಪಕ್ಷಪಾತ ಮತ್ತು ನೈಜ ಪ್ರಸಾರಕ್ಕೆ ಮತ್ತು ಜನರಿಗೆ ಅವುಗಳನ್ನು ನಂಬಲರ್ಹ ರೀತಿಯಲ್ಲಿ ತಲುಪಿಸುವುದರ ಮೇಲೆ ಅವಲಂಬಿತವಾಗಿದೆ ಎಂಬ ಅಂಶವನ್ನು ಬಲವಾಗಿ ಪ್ರತಿಪಾದಿಸಿದರು.
ಖಾಸಾ ಸುಬ್ಬಾ ರಾವು, ಫ್ರಾಂಕ್ ಮೊರೇಸ್ ಮತ್ತು ನಿಖಿಲ್ ಚಕ್ರವರ್ತಿಯಂತಹ ಹಿಂದಿನ ಹಲವು ಹೆಸರಾಂತ ಸುದ್ದಿ ಸಂಪಾದಕರ ಹೆಸರುಗಳನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, ಅವರು ಎಂದಿಗೂ ಸುದ್ದಿಗೆ ತಮ್ಮ ಅಭಿಪ್ರಾಯದ ಬಣ್ಣ ಹಚ್ಚುತ್ತಿರಲಿಲ್ಲ ಮತ್ತು ಅವರು ಸದಾ ಸುದ್ದಿ ಮತ್ತು ಅಭಿಪ್ರಾಯಗಳ ನಡುವೆ ಲಕ್ಷ್ಮಣ ರೇಖೆಯನ್ನು ಗೌರವಿಸುತ್ತಿದ್ದರು ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಪಾರ ಕೊಡುಗೆ ನೀಡಿದ ಪತ್ರಿಕೋದ್ಯಮದ ದಿಗ್ಗಜರಿಂದ ಇಂದಿನ ವೃತ್ತಿಪರರ ಸ್ಫೂರ್ತಿ ಪಡೆಯಬೇಕು. ಸುದ್ದಿಗಳನ್ನು ಅಭಿಪ್ರಾಯಗಳೊಂದಿಗೆ ಬೆರೆಸಬಾರದು ಎಂದು ಒತ್ತಿ ಹೇಳಿದ ಅವರು, ಮಾಧ್ಯಮದ ವ್ಯಕ್ತಿಗಳು ಎಂದಿಗೂ ಸತ್ಯದೊಂದಿಗೆ ರಾಜಿಮಾಡಿಕೊಳ್ಳಬೇಡಿ ಮತ್ತು ಸದಾ ಭಯ ಅಥವಾ ನಿಷ್ಪಕ್ಷಪಾತವಿಲ್ಲದೆ ಸುದ್ದಿಯನ್ನು ಪ್ರಸ್ತುತಪಡಿಸಬೇಕೆಂದು ಸಲಹೆ ನೀಡಿದರು.
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮದ ಮಾನದಂಡಗಳು ಭಾರಿ ಕುಸಿತವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು ಅವರು, ಇತ್ತೀಚಿನ ಸಾಮಾಜಿಕ ಮಾಧ್ಯಮಗಳ ಹೆಚ್ಚಳ ನೀರನ್ನು ಮತ್ತಷ್ಟು ಕೆಸರಿನಿಂದ ರಾಡಿಗೊಳಿಸಿದೆ ಎಂದು ಹೇಳಿದರು. “ ನಾವು ಇಂದು ಸದಾ ಅಭಿಪ್ರಾಯದೊಂದಿಗೆ ಸುದ್ದಿಗಳನ್ನು ಸೇರಿಸುವುದನ್ನು ಕಾಣುತ್ತಿದ್ದೇವೆ. ಅದು ಎಷ್ಟರಮಟ್ಟಿಗೆ ಎಂದರೆ ಪತ್ರಿಕೆಗಳಾಗಲಿ ಅಥವಾ ದೂರದರ್ಶನ ವಾಹಿನಿಗಳಾಗಲಿ ಕೆಲವು ಘಟನೆಗಳ ನೈಜ ಚಿತ್ರಣವನ್ನೇ ನೀಡುವುದಿಲ್ಲ ಎಂದು ಕೆಲವೊಮ್ಮೆ ಭಾವಿಸುವಂತಾಗಿದೆ’’ ಎಂದು ಅವರು ಹೇಳಿದರು. ಸಂಸತ್ತು ಮತ್ತು ಸರ್ಕಾರವು ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿಗಳ ವಿಷಯವನ್ನು ಪರಿಶೀಲಿಸಬೇಕು ಮತ್ತು ಸುಳ್ಳು ಸುದ್ದಿಗಳನ್ನು ಎದುರಿಸಲು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪಕ್ಷಪಾತದ ಸುದ್ದಿ ಪ್ರಸ್ತುತಿ ಮತ್ತು ಘಟನೆಗಳನ್ನು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಂಡು ಪ್ರಸಾರ ಮಾಡುವ ಬಗ್ಗೆ ಗಮನ ಸೆಳೆದ ಉಪರಾಷ್ಟ್ರಪತಿ, ಅಂತಹ ಪತ್ರಿಕೋದ್ಯಮದ ತೊಡಗಿರುವವರು, ತಮ್ಮ ವೃತ್ತಿಗೆ ದೊಡ್ಡ ಅಪಚಾರ ಎಸಗುತ್ತಿದ್ದಾರೆ, ಏಕೆಂದರೆ ಪತ್ರಿಕೋದ್ಯಮದ ಮೂಲಾಧಾರ ಆಡಗಿರುವುದು ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಎಂದು ಅವರು ಹೇಳಿದರು.
ಸಂಸದ ಪಿ.ಸಿ.ಮೋಹನ್, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ.ಕೆ.ಸದಾಶಿವ ಶಣೈ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್, ಬೆಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಎಸ್. ಶ್ಯಾಮ್ ಪ್ರಸಾದ್ , ಮಾಧ್ಯಮ ವೃತ್ತಿಪರರು ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.