ಖಾರ್ಗೋನ್: ಇತ್ತೀಚೆಗೆ ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ನಡೆದ ಭೀಕರ ಗಲಭೆಯ ಭಯಾನಕತೆಯನ್ನು ಸಂತ್ರಸ್ತೆ ಮಹಿಳೆ ಸಲ್ಮಾ ಬಿ ಬಿಚ್ಚಿಟ್ಟಿದ್ದು, ನೆರೆಹೊರೆಯವರೇ ನಮ್ಮ ನಿವಾಸಕ್ಕೆ ಬೆಂಕಿ ಹಚ್ಚಿ, ದಾಳಿ ನಡೆಸಿದರು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತೆ, ನೆರೆಹೊರೆ ಮತ್ತು ನಮ್ಮ ಪರಿಚಯದ ಜನರೇ ನಮ್ಮ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿ ಹಿಂಸಾಚಾರ ನಡೆಸಲಾಗಿದ್ದು, ಹಿಂದೂಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಇನ್ನು ಮುಂದಕ್ಕೆ ಈ ಪ್ರದೇಶದಲ್ಲಿ ನೆಲೆಸಲು ಭಯವಾಗುತ್ತಿದೆ. ಆದ್ದರಿಂದ ಈ ಪ್ರದೇಶವನ್ನು ತೊರೆಯುವುದಾಗಿ ತಿಳಿಸಿದ ಸಂತ್ರಸ್ತೆ ಸಲ್ಮಾ ಬಿ, ಸಂಬಂಧಿಕರು ಇರುವ ಕಡೆಗೆ ತೆರಳುವುದಾಗಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಖಾರ್ಗೂನ್ ಎಂಬಲ್ಲಿನ ಸಂಜಯ್ ನಗರದ ನಿವಾಸಿಯಾದ ಸಲ್ಮಾ ಬಿ ಅವರು 3 ವರ್ಷಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡಿದ್ದರು ಮತ್ತು ಮೂವರು ಮಕ್ಕಳೊಂದಿಗೆ ಜೀವಿಸುತ್ತಿದ್ದರು.
ಗಲಭೆ ಪೀಡಿತ ಸಂಜಯ್ ನಗರದಲ್ಲಿ ಸಲ್ಮಾ ಬಿ ಅವರ ಮನೆ ಸೇರಿದಂತೆ ಕನಿಷ್ಠ 5 ಮನೆಗಳನ್ನು ಸುಟ್ಟು ಹಾಕಲಾಗಿತ್ತು.
ಶಾಂತಿಭಂಜಕರ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.