ನವದೆಹಲಿ: ಹನುಮ ಜಯಂತಿಯ ವೇಳೆ ಜಹಂಗೀರ್ ಪುರದಲ್ಲಿ ನಡೆದಿದ್ದ ಘರ್ಷಣೆಯ ನೆಪದಲ್ಲಿ ಅಮಾಯಕ ಮುಸ್ಲಿಮರ ಮನೆ ಮತ್ತು ಕಟ್ಟಡಗಳನ್ನು ಧ್ವಂಸಗೈದಿರುವ ಬಗ್ಗೆ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸುಪ್ರೀಂ ಕೋರ್ಟ್’ನ ಆದೇಶದ ಹೊರತಾಗಿಯೂ ಮುನ್ಸಿಪಲ್ ಅಧಿಕಾರಿಗಳು ಕ್ಯಾರೇ ಅನ್ನದೇ ಮನೆಗಳನ್ನು ಧ್ವಂಸಗೈದಿದ್ದರು. ಇದೀಗ ಘಟನೆಯ ಬಗ್ಗೆ ತುಟಿ ಬಿಚ್ಚದೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ನೆಟ್ಟಿಗರು ಅಭಿಯಾನ ಕೈಗೊಂಡಿದ್ದಾರೆ.
ಬೆಂಗಳೂರಿನ ರೈತ ಸಮಾವೇಶದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬಂದಿಳಿದಿರುವ ಕೇಜ್ರಿವಾಲ್’ಗೆ ಟ್ವಿಟ್ಟರ್ ನಲ್ಲಿ #GoBackKejriwal ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುವ ಮೂಲಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಟ್ವೀಟ್’ಗಳು ಮಾಡಲಾಗಿದ್ದು ಕೇಜ್ರಿವಾಲ್ ನೀವು ನಮ್ಮ ಗೌರವ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದೀರಿ ಎಂದು ಟ್ವಿಟರಿಗರು ಕಿಡಿಕಾರಿದ್ದಾರೆ.
ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಅವರ ಕೇಸರೀಕರಣಗೊಂಡ ಸಂಘಿ ಮನಸ್ಥಿತಿಯನ್ನು ಗುರುತಿಸಲು ಜನರು ವಿಫಲರಾಗಿದ್ದಾರೆ, ಇದೀಗ ಅವರು ಬಹಿರಂಗಗೊಂಡಿದ್ದಾರೆ ಎಂದು ಟ್ವಿಟರಿಗರು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.