ಬೆಂಗಳೂರು: ಪಿಎಸ್ ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದು ಒಂದು ವಾರ ಕಳೆದರೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡುತ್ತಿರುವ ಕಾಂಗ್ರೆಸ್, ಪಿಎಸ್ಐ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಗೂ ಬಿಜೆಪಿಗೂ ಸಂಬಂಧವೇ ಇಲ್ಲವಂತೆ!, ಆಕೆ ಬಿಜೆಪಿಯ ಪದಾಧಿಕಾರಿ ಎಂಬುದು ಸುಳ್ಳೇ? ಗೃಹಸಚಿವರೊಂದಿಗೆ ಆಪ್ತ ಒಡನಾಟ ಹೊಂದಿರುವುದು ಸುಳ್ಳೇ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿಗೂ, ದಿವ್ಯಾಗೂ ಸಂಬಂಧವಿಲ್ಲವೆಂದರೆ ಸಚಿವರುಗಳೊಂದಿಗೆ, ಮಾಜಿ ಸಿಎಂನೊಂದಿಗೆ, ಗೃಹಸಚಿವರೊಂದಿಗೆ ಆಕೆಗಿರುವ ಸಂಬಂಧವೇನು? ಈ ಕುರಿತು ಬಿಜೆಪಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ,
‘ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಲವು ದಿನಗಳವರೆಗೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರಲಿಲ್ಲ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನವಿಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ, ದಿವ್ಯಾ ಮನೆಯಲ್ಲಿ ತಿಂದ ಒಂದು ಪ್ಲೇಟ್ ಕೇಸರಿ ಬಾತ್‌ಗೆ ಇಷ್ಟೊಂದು ನಿಯತ್ತೇ’ ಎಂದು ಪ್ರಶ್ನಿಸಿದೆ.
ದಿವ್ಯಾ ಹಾಗರಗಿಯ ಹಗರಣವನ್ನು ಅವರ ಬಿಜೆಪಿ ಪಾಳಯದ ಆಪ್ತ ವರ್ಗ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪಿಸಿದೆ.