ಮಂಗಳೂರು: ಬಸ್ ತಂಗುದಾಣದ ‘ದೀಪಕ್ ರಾವ್’ ಹೆಸರು ತೆರವಿಗೆ SDPI ಒತ್ತಾಯ | ಪಾಲಿಕೆ ಅನುಮತಿ ನೀಡಿಲ್ಲವೆಂದು ತಗಾದೆ!

Prasthutha|

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಬಸ್ ತಂಗುದಾಣಕ್ಕೆ ಇರಿಸಲಾದ ಬಿಜೆಪಿ ಕಾರ್ಯಕರ್ತ, ದಿವಂಗತ ದೀಪಕ್ ರಾವ್ ಹೆಸರನ್ನು ತಕ್ಷಣವೇ ತೆರವುಗೊಳಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.

- Advertisement -

ಇಲ್ಲಿನ ಕಾಟಿಪಳ್ಳದ 3ನೇ ವಾರ್ಡ್ ನಲ್ಲಿರುವ ಬಸ್ ನಿಲ್ದಾಣಕ್ಕೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹೆಸರನ್ನಿಡಲಾಗಿತ್ತು. ಈ ಬಸ್ ತಂಗುದಾಣದ ಉದ್ಘಾಟನೆ ಕಳೆದ ವರ್ಷದ ಅಕ್ಟೋಬರ್ ನಲ್ಲಿ ನೆರವೇರಿತ್ತು.

ಮೊದಲೇ ಕೋಮು ಸೂಕ್ಷ್ಮ ಪ್ರದೇಶವೆನೆಸಿಕೊಂಡ ಕಾಟಿಪಳ್ಳ ಪರಿಸರದಲ್ಲಿ ದೀಪಕ್ ರಾವ್ ಹೆಸರಿನ ಬಸ್ ತಂಗುದಾಣ ತಲೆ ಎತ್ತಿದ ಪರಿಣಾಮ ಆರಂಭದಲ್ಲಿಯೇ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆ ನಡೆದಿತ್ತು. ಹಾಗಾಗಿ ಎಸ್ಡಿಪಿಐ ಆಗಿಂದಲೇ ದೀಪಕ್ ರಾವ್ ಹೆಸರನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಾ ಬಂದಿದೆ.

- Advertisement -

ಪಾಲಿಕೆ ಸದಸ್ಯರಿಂದ ತಪ್ಪು ಮಾಹಿತಿ ಆರೋಪ: ಮಹಾನಗರ ಪಾಲಿಕೆಯ ಅಧೀನದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾಗಿಯೂ ಎಸ್ಡಿಪಿಐ ಆರೋಪಿಸಿದೆ. ಕಳೆದ ವರ್ಷ ಬಸ್ ತಂಗುದಾಣ ನಿರ್ಮಿಸುವ ಮುನ್ನ ಪಾಲಿಕೆ ಅನುದಾನದಲ್ಲಿಯೇ ಬಸ್ ತಂಗುದಾಣ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಅವರಿಗೆ ಶುಭಕೋರಿ ಬ್ಯಾನರ್ ಹಾಕಲಾಗಿತ್ತು. ಆದರೆ ಎಸ್ಡಿಪಿಐ ಸದಸ್ಯರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ ಅಂತಹ ಯಾವುದೇ ಅನುದಾನವಾಗಲೀ, ಬಸ್ ನಿಲ್ದಾಣ ನಿರ್ಮಾಣಕ್ಕೆ ಪರವಾನಿಗೆಯಾಗಲೀ ನೀಡಲಾಗಿಲ್ಲ ಎಂದು ತಿಳಿಸಿದ್ದಾಗಿ ಸ್ಥಳೀಯ ಕಾಟಿಪಳ್ಳ 3ನೇ ವಾರ್ಡ್ ನ ಎಸ್ಡಿಪಿಐ ಸದಸ್ಯ ಶಮೀರ್ ಕಾಟಿಪಳ್ಳ ಹೇಳಿದ್ದಾರೆ.

ಅಲ್ಲದೇ, ದೀಪಕ್ ರಾವ್ ಹೆಸರು ಬಸ್ ನಿಲ್ದಾಣದ ಬೋರ್ಡ್ ನಿಂದ ತೆರವುಗೊಳಿಸದೇ ಹೋದಲ್ಲಿ, ಮುಂದಿನ ದಿನಗಳಲ್ಲಿ 1992ರ ಗಲಭೆ ಸಂದರ್ಭ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಲೇಮಾನ್ ಅವರ ಹೆಸರಿನಲ್ಲಿ ಅದೇ ವಾರ್ಡ್ ನಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸುವುದಾಗಿ ಶಮೀರ್ ತಿಳಿಸಿದ್ದಾರೆ.

ದೀಪಕ್ ರಾವ್ ಹೆಸರಿರಿಸಿರುವ ಬಸ್ ತಂಗುದಾಣಕ್ಕೆ ಕಳೆದ ನಾಲ್ಕು ತಿಂಗಳಿನಿಂದಲೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.



Join Whatsapp