ಅಲೀಗಡ್: ಅಲೀಗಡದ 21 ಕ್ರಾಸಿಂಗ್ ಪಾಯಿಂಟ್‌ನಲ್ಲಿ ಸಂಘಪರಿವಾರದ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಿಸುವುದಾಗಿ ಬೆದರಿಕೆ ಒಡ್ಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಮಹಿಳಾ ಘಟಕದ ನಾಯಕಿ ರುಬಿನಾ ಖಾನ್ ದೇವಾಲಯಗಳ ಮುಂಭಾಗ ಕುರ್’ಆನ್ ಪಠಿಸುವ ಕುರಿತಾಗಿ ಹೇಳಿಕೆ ನೀಡಿದ್ದರು. ಇದೀಗ ಹೇಳಿಕೆಗೆ ಸಂಬಂಧಿಸಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ರುಬಿನಾ ವಿರುದ್ದ ಪ್ರಕರಣ ದಾಖಲಾಗಿದೆ.
ಹಿಂದೂ ದೇವಾಲಯಗಳ ಮುಂದೆ ಕುರ್’ಆನ್ ಪಠಣ ಮಾಡುವುದಾಗಿ ಉತ್ತರ ಪ್ರದೇಶದಲ್ಲಿ ರುಬಿನಾ ಖಾನ್ ಹೇಳಿದ್ದರು. ‘ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯುವಂತೆ ಆಗ್ರಹಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಲಾಗುತ್ತಿದೆ. ರಾಜ್ಯ ಸರ್ಕಾರವು ಬಜರಂಗ ದಳದಂತಹ ಬಲಪಂಥೀಯ ಸಂಘಟನೆಗಳ ಬಗ್ಗೆ ಮೃದು ಧೋರಣೆ ಹೊಂದಿದೆ’ ಎಂದು ಆರೋಪಿಸಿ ರುಬೀನಾ ಹೇಳಿಕೆ ನೀಡಿದ್ದರು. ಇದೀಗ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಅಡಿಯಲ್ಲಿ ಕೇಸು ದಾಖಲಾಗಿದೆ.
ರುಬೀನ ಖಾನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಬರಿ ಮಸೀದಿ ಪ್ರಕರಣದಲ್ಲಿ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ, ‘ ರಾಜಕೀಯ ಮುಖಂಡರು ಸೂಕ್ಷ್ಮ ವಿಚಾರಗಳಲ್ಲಿ ಲಾಭ ಪಡೆಯುವುದನ್ನು ನಿಲ್ಲಿಸಬೇಕು. ನಮಾಜ್ ಅನ್ನು ಮಸೀದಿಗಳಲ್ಲಿ ನಡೆಸಬೇಕೇ ಹೊರತು ದೇವಾಲಯಗಳ ಮುಂದೆ ಅಲ್ಲ ಎಂದು ಕುರ್’ಆನ್ ಪಠಿಸುವ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.