ಬೆಂಗಳೂರು: ತೀವ್ರ ವಿರೋಧದ ಹೊರತಾಗಿಯೂ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಈ ವರ್ಷದಿಂದಲೇ ಸೇರ್ಪಡೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈತಿಕ ಶಿಕ್ಷಣದ ಬಗ್ಗೆ ಪಠ್ಯದಲ್ಲಿ ಸೇರಿಸುವ ಬೇಡಿಕೆಗಳು ಬಂದಿದೆ. ಹೀಗಾಗಿ ಪಂಚತಂತ್ರ, ರಾಮಾಯಣ, ಮಹಾಭಾರತ ಸೇರಿದಂತೆ ಮಾರಲ್ ಸೈನ್ಸ್ ಅಂಶಗಳನ್ನು ಪಠ್ಯದಲ್ಲಿ ಅಳವಡಿಕೆ ಮಾಡುತ್ತೇವೆ ಎಂದಿದ್ದಾರೆ.
ನೈತಿಕ ಶಿಕ್ಷಣದ ವಿಭಾಗದಲ್ಲಿ ಭಗವದ್ಗೀತೆ ಸೇರ್ಪಡೆಗೆ ಸರ್ಕಾರ ನಿರ್ಧರಿಸಿದ್ದು, ಈ ಸಾಲಿನಿಂದಲೇ ಸೇರ್ಪಡೆ ಮಾಡುತ್ತೇವೆ. ಇದು ನೈತಿಕ ಶಿಕ್ಷಣದ ಭಾಗವಾಗಿರುವುದರಿಂದ ಪರೀಕ್ಷೆಗೆ ಈ ವಿಷಯ ಇರುವುದಿಲ್ಲ. ಶಾಲೆಯಲ್ಲಿ ಆ ಧರ್ಮ, ಈ ಧರ್ಮ ಎಂದು ವಿಭಾಗ ಮಾಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಗಿಲ್ಲ ಅನುಮತಿ:
ಶುಕ್ರವಾರದಿಂದ ಪ್ರಾರಂಭವಾಗುವ ಪಿಯುಸಿ ಪರೀಕ್ಷೆಗೆ ಹಿಜಬ್ ನಿಷೇಧಿಸಲಾಗಿದೆ ಎಂದು ನಾಗೇಶ್ ತಿಳಿಸಿದ್ದಾರೆ. ಇದೀಗಾಗಲೇ ಡಿಸಿ, ಎಸ್ಪಿಗಳ ಜೊತೆ ಸಭೆ ನಡೆಸಿದ್ದು, ಸಮವಸ್ತ್ರದಲ್ಲೇ ಪರೀಕ್ಷೆಗೆ ಬರಬೇಕು. ಧಾರ್ಮಿಕ ಭಾವನೆಯ ಸಮವಸ್ತ್ರ ಧರಿಸಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ.