ಹೈದರಾಬಾದ್: ವಧುವೊಬ್ಬಳು ಭಾವಿ ಪತಿಯೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಾ ಚಾಕುವಿನಿಂದ ಆತನ ಕತ್ತು ಕೊಯ್ದು ಪರಾರಿಯಾಗಿರುವ ವಿಚಿತ್ರ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಅನಕಾಪಲ್ಲಿ ಜಿಲ್ಲೆಯ ಬುಚ್ಚಯ್ಯ ಪೇಟೆ ಮಂಡಲದ ಕೊಮ್ಮಲಪುಡಿಯಲ್ಲಿ ನಡೆದಿರುವ ಈ ವಿಚಿತ್ರ ಘಟನೆಯಲ್ಲಿ ಗಾಯಗೊಂಡ ಭಾವಿ ಪತಿಯನ್ನು ಅನಕಾಪಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ.
ಮಡುಗುಳ ಮಂಡಲ ಘಟ್ಟ ರಸ್ತೆಯ ಅಡ್ಡೆಪಲ್ಲಿ ರಾಮನಾಯುಡು ಹಾಗೂ ರವಿಕಮಠಂನ ವಿಯ್ಯಪು ಪುಷ್ಪ ಅವರ ವಿವಾಹ ನಿಶ್ಚಯವಾಗಿತ್ತು. ಯುವಕನ ಜೊತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ನಟಿಸಿದ ಯುವತಿ, ಏಕಾಏಕಿ ಹಲ್ಲೆ ನಡೆಸಿ ಚಾಕುವಿನಿಂದ ಕತ್ತು ಕೊಯ್ದಿದ್ದಾಳೆ.
ಮುಂದಿನ ತಿಂಗಳು 20ಕ್ಕೆ ಇವರಿಬ್ಬರ ವಿವಾಹ ನಿಗದಿಯಾಗಿತ್ತು. ಇವರಿಬ್ಬರು ಸೋಮವಾರ ವಡ್ಡಾಡಿಯಲ್ಲಿ ಖರೀದಿಗೆಂದು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಶಾಪಿಂಗ್ ಮುಗಿಸಿ ಕೋಮಲ್ಲಪುಡಿ ಉಪನಗರದಲ್ಲಿರುವ ಬಾಬಾ ಆಶ್ರಮದಲ್ಲಿ ಸಮಯ ಕಳೆಯಲೆಂದು ಗಾಡಿ ನಿಲ್ಲಿಸಿದ್ದರು. ಈ ವೇಳೆ ಹುಡುಗನ ಜೊತೆ ಕಣ್ಣಾ ಮುಚ್ಚಾಲೆ ಆಟ ಆಡುವಂತೆ ಹೇಳಿ ಚಾಕುವಿನಿಂದ ಹುಡುಗನ ಕತ್ತು ಕೊಯ್ದಿದ್ದಾಳೆ. ಅದಷ್ಟೇ ಅಲ್ಲದೇ ನಂತರ ತನ್ನ ಸ್ವಂತ ದ್ವಿಚಕ್ರ ವಾಹನದಲ್ಲಿ ಭಾವಿ ಪತಿಯನ್ನು ರವಿಕಮಠದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಗೆ ಸೇರಿಸಿದ ಆಕೆ, ಯುವಕನ ಗಂಟಲಿಗೆ ಏನೋ ಇರಿದಿದೆ ಎಂದು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿ ಅಲ್ಲಿಂದ ಹೊರಟು ಹೋಗಿದ್ದಾಳೆ.
ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಸ್ಥಿತಿ ಗಂಭೀರವಾಗಿದ್ದರಿಂದ ಅನಕಾಪಲ್ಲಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆಕೆಗೆ ಮದುವೆ ಇಷ್ಟವಿಲ್ಲದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ಯುವಕ ಹೇಳಿದ್ದಾನೆ. ದಾಳಿ ಮಾಡಿದ ನಂತರ ಅವಳೇ ಹುಡುಗನ ಬಳಿ ಮದುವೆ ಇಷ್ಟ ಇಲ್ಲವೆಂದು ಹೇಳಿಕೊಂಡಿದ್ದಾಳೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ